ಡೈಲಿವಾರ್ತೆ:08/ಸೆ./2026

ಪದ್ಮಶ್ರೀ ಹರೇಕಳ ಹಾಜಬ್ಬರಿಗೂ SIR ನೋಟಿಸ್! ಪ್ರಮಾದ ಅರಿತು ಮನೆಗೆ ತೆರಳಿ ಕ್ಷಮೆಯಾಚಿಸಿದ ಅಧಿಕಾರಿಗಳು

ಮಂಗಳೂರು: ಅಕ್ಷರ ಸಂತ ಎಂದೇ ಜನಪ್ರಿಯರಾಗಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿಯಾಗಿದ್ದು, ಬಳಿಕ ಪ್ರಮಾದ ಅರಿತ ಅಧಿಕಾರಿಗಳು ಸ್ವತಃ ಅವರ ಮನೆಗೆ ತೆರಳಿ ದಾಖಲೆಗಳನ್ನು ಪಡೆದುಕೊಂಡು ಕ್ಷಮೆಯಾಚಿಸಿರುವ ಘಟನೆ ನಡೆದಿದೆ.

2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಆದರೆ ನಂತರದ ದಾಖಲೆಗಳಲ್ಲಿ ಅವರ ಹೆಸರು ‘ಹರೇಕಳ ಹಾಜಬ್ಬ’ ಎಂದು ನಮೂದಾಗಿದ್ದ ಹಿನ್ನೆಲೆಯಲ್ಲಿ ಹೆಸರು ಹೊಂದಾಣಿಕೆ ಪರಿಶೀಲನೆಯ ಸಂದರ್ಭದಲ್ಲಿ ವ್ಯತ್ಯಾಸ ಕಂಡುಬಂದಿತ್ತು.
ಈ ಹಿನ್ನೆಲೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಅಧಿಕಾರಿಗಳು ಹಾಜಬ್ಬರಿಗೆ ನೋಟಿಸ್ ನೀಡಿದ್ದರು. ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಆದರೆ, ನೋಟಿಸ್ ನೀಡಿದ ಬಳಿಕ ಪ್ರಕರಣದ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಉಳ್ಳಾಲ ತಾಲೂಕಿನ ಹರೇಕಳದಲ್ಲಿರುವ ಹಾಜಬ್ಬರ ಮನೆಗೆ ಸ್ವತಃ ಭೇಟಿ ನೀಡಿದ್ದಾರೆ. ಅಗತ್ಯ ದಾಖಲೆಗಳನ್ನು ಅಲ್ಲಿಯೇ ಪಡೆದುಕೊಂಡ ಅಧಿಕಾರಿಗಳು, ಉಂಟಾದ ಅನಾನುಕೂಲತೆ ಮತ್ತು ಪ್ರಮಾದಕ್ಕಾಗಿ ಹಾಜಬ್ಬರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬೀದಿ ಬದಿಯಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ತಮ್ಮ ದುಡಿಮೆಯ ಹಣವನ್ನು ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು, ಸ್ವಗ್ರಾಮದಲ್ಲಿ ಶಾಲೆ ನಿರ್ಮಿಸುವ ಮೂಲಕ ಶಿಕ್ಷಣದ ಬೆಳಕನ್ನು ಹರಿಸಿದವರು. ಅವರ ಅಪೂರ್ವ ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ದೇಶದಾದ್ಯಂತ ಅಕ್ಷರ ಸಂತನಾಗಿ ಗುರುತಿಸಿಕೊಂಡಿರುವ ಹರೇಕಳ ಹಾಜಬ್ಬರಿಗೂ ದಾಖಲೆಗಳಲ್ಲಿನ ಹೆಸರು ವ್ಯತ್ಯಾಸದ ಕಾರಣ ಎಸ್‌ಐಆರ್‌ ನೋಟಿಸ್ ಜಾರಿಯಾಗಿರುವುದು ಗಮನ ಸೆಳೆದಿದ್ದು, ಬಳಿಕ ಅಧಿಕಾರಿಗಳು ಮನೆಗೆ ತೆರಳಿ ಕ್ಷಮೆಯಾಚಿಸಿರುವ ಪ್ರಸಂಗ ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.