


ಡೈಲಿವಾರ್ತೆ:09/ಸೆ./2026

ಕೊಲ್ಲೂರು ಮೂಕಾಂಬಿಕಾ ದೇವಳದ ಹೆಸರಲ್ಲಿ ಸೈಬರ್ ವಂಚನೆ!
ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ರೂಂ ಬುಕ್ಕಿಂಗ್ ಹೆಸರಲ್ಲಿ ಹಣ ವಸೂಲಿ – ಪ್ರಕರಣ ದಾಖಲು

ಕೊಲ್ಲೂರು: ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಸತಿ ಕೊಠಡಿ ಕಾಯ್ದಿರಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಸೈಬರ್ ವಂಚಕರ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ (56) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದೇವಸ್ಥಾನದ ಅಧಿಕೃತ ವಸತಿ ಬುಕ್ಕಿಂಗ್ ವೆಬ್‌ಸೈಟ್ ಇರುವುದನ್ನು ದುರ್ಬಳಕೆ ಮಾಡಿಕೊಂಡ ಅಪರಿಚಿತರು, ‘hotel accommodation’ ಹೆಸರಿನಲ್ಲಿ jagadambikaguesthouse.xyz ಎಂಬ ಅನಧಿಕೃತ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ದೇವಳದ ಜಗದಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಕಾಯ್ದಿರಿಸಿಕೊಡುವುದಾಗಿ ನಂಬಿಸಿ ಭಕ್ತರನ್ನು ವಂಚಿಸಲಾಗುತ್ತಿತ್ತು.
ನಕಲಿ ವೆಬ್‌ಸೈಟ್ ಮೂಲಕ ಕೊಠಡಿ ಬುಕ್ಕಿಂಗ್‌ಗಾಗಿ ಸಂಪರ್ಕಿಸುವ ಭಕ್ತರಿಗೆ ವಾಟ್ಸ್‌ಆಪ್‌ನಲ್ಲಿ PhonePe QR ಕೋಡ್ ಕಳುಹಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತಿತ್ತು. ಹಣ ಪಡೆದ ಬಳಿಕ ದೇವಳದ ಹೆಸರಿನಲ್ಲಿ ನಕಲಿ ರಶೀದಿಗಳನ್ನು ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ರೀತಿಯಾಗಿ ದೇವಳದ ವಸತಿ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದಾಗಿದ್ದ ಹಲವು ಭಕ್ತರನ್ನು ನಂಬಿಸಿ ಹಣ ಪಡೆದು ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ದೇವಸ್ಥಾನ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ನಕಲಿ ವೆಬ್‌ಸೈಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ದೇವಸ್ಥಾನದ ಅಧಿಕೃತ ವಸತಿ ಪೋರ್ಟಲ್ karnatakatemplesaccommodation.com ಆಗಿದ್ದು, ಅಧಿಕೃತ ಪೋರ್ಟಲ್‌ನಲ್ಲಿಯೇ ವಸತಿ ಕಾಯ್ದಿರಿಸುವಂತೆ ಭಕ್ತರಿಗೆ ಸೂಚಿಸಲಾಗಿದೆ. ಅಧಿಕೃತ ಪೋರ್ಟಲ್‌ನಲ್ಲಿ ಕೊಲ್ಲೂರಿನ ದೇವಳದ ಅತಿಥಿ ಗೃಹದ ಕೊಠಡಿಗಳ ಮಾಹಿತಿ ಲಭ್ಯವಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2026ರಂತೆ ಐಟಿ ಕಾಯ್ದೆಯ ಕಲಂ 66(c) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ವೆಬ್‌ಸೈಟ್ ಸೃಷ್ಟಿಸಿ ಹಣ ವಸೂಲಿ ಮಾಡಿರುವವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.