ಡೈಲಿವಾರ್ತೆ:09/ಸೆ./2026

ರಾಮನಗರ ಜಿಲ್ಲಾಸ್ಪತ್ರೆ ವೈದ್ಯನ ಲಂಚಾವತಾರ ಆರೋಪ: ಹಣ ಕೊಡದಿದ್ದರೆ ಶಸ್ತ್ರಚಿಕಿತ್ಸೆ ಇಲ್ಲ!

ರಾಮನಗರ, ಸೆ. 9: ಬಡವರು ಹಾಗೂ ಸಾಮಾನ್ಯ ಜನರಿಗೆ ಉಚಿತ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸಬೇಕಾದ ರಾಮನಗರ ಜಿಲ್ಲಾಸ್ಪತ್ರೆಯಲ್ಲೇ ಲಂಚದ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಸ್ಪತ್ರೆಯ ಯುರಾಲಜಿ ವಿಭಾಗದ ವೈದ್ಯ ಡಾ. ವಿಶ್ವನಾಥ್ ಆರ್. ಅವರು ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆಗೆ ಬರುವ ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶಸ್ತ್ರಚಿಕಿತ್ಸೆಗೆ ತಲಾ ₹30 ಸಾವಿರ ನೀಡಬೇಕು ಇಲ್ಲವಾದರೆ ಆಪರೇಷನ್ ಮಾಡುವುದಿಲ್ಲ ಎಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದ್ದು, ವೈದ್ಯಕೀಯ ಕ್ಷೇತ್ರದ ಘನತೆಗೆ ಧಕ್ಕೆ ತರುವಂತಹ ಆರೋಪಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

₹30 ಸಾವಿರಕ್ಕೆ ಬೇಡಿಕೆ?
ಕಳೆದ ಮೂರು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಏಕೈಕ ಯುರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವನಾಥ್ ವಿರುದ್ಧ ಈ ಹಿಂದೆ ಕೂಡ ಲಂಚದ ಆರೋಪಗಳು ಕೇಳಿಬಂದಿದ್ದವು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಅಗತ್ಯ ಶಸ್ತ್ರಚಿಕಿತ್ಸಾ ಪರಿಕರಗಳಿಲ್ಲ. ಅವುಗಳನ್ನು ಹೊರಗಿನಿಂದ ತರಿಸಬೇಕು ಎಂದು ಹೇಳಿ ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಇದೆ.

ಈ ಕುರಿತು ಲೋಕಾಯುಕ್ತ ಎಸ್ಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಆರೋಪಿತ ವೈದ್ಯರು ತಮ್ಮ ವರ್ತನೆಯನ್ನು ಮುಂದುವರಿಸಿದ್ದಾರೆ ಎಂದು ದೂರಲಾಗಿದೆ.

ರಕ್ತಸ್ರಾವವಾಗಿದ್ದರೂ ಚಿಕಿತ್ಸೆ ನೀಡಲಿಲ್ಲ?
ಕುರುಬರಹಳ್ಳಿ ಗ್ರಾಮದ ರಂಗೇಗೌಡ ಎಂಬವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವರಿಂದಲೂ ₹30 ಸಾವಿರಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯ ವೇಳೆ ಸುಮಾರು ₹7 ಸಾವಿರ ಮೌಲ್ಯದ ಔಷಧಗಳನ್ನು ಹೊರಗಿನಿಂದ ತರಿಸಿಕೊಳ್ಳಲಾಗಿತ್ತು. ಆದರೆ ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆಯ ಬಳಿಕ ಹೊಟ್ಟೆಯಿಂದ ರಕ್ತಸ್ರಾವವಾಗುತ್ತಿದ್ದರೂ ಸೂಕ್ತ ಚಿಕಿತ್ಸೆ ಅಥವಾ ಕನಿಷ್ಠ ಬ್ಯಾಂಡೇಜ್ ಕೂಡ ಮಾಡದೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

₹3 ಸಾವಿರ ಪಡೆದರೂ ಆಪರೇಷನ್ ಮಾಡದೆ ವಾಪಸ್: ಇದೇ ವೇಳೆ ಜಾಲಮಂಗಲ ಗ್ರಾಮದ ಲೀಲಾವತಿ ಅವರಿಂದಲೂ ₹30 ಸಾವಿರಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆಗೂ ಮುನ್ನವೇ ₹3 ಸಾವಿರ ಪಡೆದಿದ್ದರೂ, ಉಳಿದ ಹಣ ನೀಡಿಲ್ಲ ಎಂಬ ಕಾರಣಕ್ಕೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಪರೇಷನ್ ಥಿಯೇಟರ್‌ನಲ್ಲೇ ಕೂರಿಸಿ, ಕೊನೆಗೆ ಶಸ್ತ್ರಚಿಕಿತ್ಸೆ ನಡೆಸದೆ ವಾಪಸ್ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಗಳು ಇದೀಗ ಜಿಲ್ಲಾಸ್ಪತ್ರೆಯ ಉಚಿತ ಆರೋಗ್ಯ ಸೇವೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ. ಹಣ ನೀಡಿದವರಿಗೆ ಮಾತ್ರ ಚಿಕಿತ್ಸೆ, ಹಣ ನೀಡದವರಿಗೆ ಚಿಕಿತ್ಸೆ ನಿರಾಕರಣೆ ಎಂಬ ಆರೋಪಗಳು ನಿಜವಾಗಿದ್ದರೆ, ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ವೈದ್ಯರ ವಿರುದ್ಧ ರೋಗಿಗಳು ಹಾಗೂ ಅವರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಆರೋಗ್ಯ ಇಲಾಖೆ ಮತ್ತು ಲೋಕಾಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.