ಡೈಲಿವಾರ್ತೆ:09/ಸೆ./2026

ಪುತ್ತೂರು: ವಿದ್ಯಾರ್ಥಿನಿಲಯಕ್ಕೇ ನುಗ್ಗಿ ವಿದ್ಯಾರ್ಥಿನಿಯರ ಬಟ್ಟೆ ಕಳವು – ಆರೋಪಿ ಬಂಧನ

ಪುತ್ತೂರು: ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ, ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪುತ್ತೂರು ತಾಲೂಕಿನ ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂದು ಗುರುತಿಸಲಾಗಿದೆ.

ಘಟನೆ ವಿವರ:
ಸೆ.2ರಂದು ಬೆಳಗ್ಗೆ ವಿದ್ಯಾರ್ಥಿನಿಯರ ಬಟ್ಟೆಗಳು ಕಾಣೆಯಾಗಿರುವುದು ನಿಲಯದ ಮೇಲ್ವಿಚಾರಕಿಯ ಗಮನಕ್ಕೆ ಬಂದಿತ್ತು. ಘಟನೆ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ಬಳಿಕ ವಿದ್ಯಾರ್ಥಿನಿಲಯದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕಳವು ಪ್ರಕರಣದ ಸುಳಿವು ದೊರೆತಿದೆ.
ಸಿಸಿ ಕ್ಯಾಮರಾ ದೃಶ್ಯದಲ್ಲಿ ಅಪರಿಚಿತ ಯುವಕನೋರ್ವ ಬೆಳಗಿನ ಜಾವ ವಿದ್ಯಾರ್ಥಿನಿಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿ, ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕೊಂಡೊಯ್ಯುತ್ತಿರುವುದು ಕಂಡುಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು.

ಸೆ.5ರಂದು ನೀಡಲಾದ ದೂರಿನ ಆಧಾರದ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ.54/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 331(4), 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಮುಂದುವರಿಸಿದ ಪೊಲೀಸರು ಪುತ್ತೂರು ತಾಲೂಕಿನ ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂಬಾತನನ್ನು ಸೆ.7ರಂದು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.