ಡೈಲಿವಾರ್ತೆ:20/ಸೆ./2026

ಶಿರ್ವ: ಮೇಯಲು ಬಿಟ್ಟಿದ್ದ ದನ ನಾಪತ್ತೆ – ಹುಡುಕಾಟದ ವೇಳೆ ಟೆಂಪೋದಲ್ಲಿ ಪತ್ತೆ! ಪ್ರಶ್ನಿಸಿದ ಕೂಡಲೇ ಟೆಂಪೋ ಚಾಲಕ ವಾಹನದೊಂದಿಗೆ ಪರಾರಿ

ಶಿರ್ವಾ: ಮೇಯಲು ಬಿಟ್ಟಿದ್ದ ಎರಡು ವರ್ಷದ ಕಪ್ಪು ಬಣ್ಣದ ದನವನ್ನು ಕಳ್ಳತನ ಮಾಡಿ, ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುತ್ತು ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್‌ (48) ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸೆ.19ರಂದು ಬೆಳಗ್ಗೆ ದೂರುದಾರರು ತಮ್ಮ ಮೂರು ದನಗಳನ್ನು ಕಟ್ಟಿ, ಎರಡು ದನಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಬಿಸಿಲಿನ ತೀವ್ರತೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ದನಗಳನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು.

ಸಂಜೆ 4 ಗಂಟೆ ಸುಮಾರಿಗೆ ದೂರುದಾರರ ಪತಿ ಲೂವೀಸ್‌ ಕ್ವಾಡ್ರಸ್‌ ಅವರು ದನಗಳನ್ನು ಮನೆಗೆ ಕರೆತರಲು ತೆರಳಿದಾಗ ಮೂರು ದನಗಳು ಸ್ಥಳದಲ್ಲಿದ್ದವು. ಆದರೆ ಮೇಯಲು ಬಿಟ್ಟಿದ್ದ ಎರಡು ದನಗಳ ಪೈಕಿ ಸುಮಾರು ಎರಡು ವರ್ಷ ಪ್ರಾಯದ ಕಪ್ಪು ಬಣ್ಣದ ಒಂದು ದನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಪತ್ನಿಗೆ ಮಾಹಿತಿ ನೀಡಿದ ಬಳಿಕ ಇಬ್ಬರೂ ಸೇರಿ ದನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸ್ವಲ್ಪ ದೂರದಲ್ಲಿ ಟೆಂಪೋವೊಂದು ಕಂಡುಬಂದಿದ್ದು, ಪರಿಶೀಲಿಸಿದಾಗ ಅದರೊಳಗೆ ನಾಪತ್ತೆಯಾಗಿದ್ದ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡುಬಂದಿದೆ. ಅದರ ಜತೆಗೆ ಮತ್ತೊಂದು ದನವನ್ನೂ ಟೆಂಪೋದಲ್ಲಿ ಕಟ್ಟಿಹಾಕಲಾಗಿತ್ತು ಎನ್ನಲಾಗಿದೆ.
ಟೆಂಪೋ ಬಳಿ ಪರಿಚಯದ ಉಮ್ಮರಬ್ಬ ಸೇರಿದಂತೆ ಕೆಲವರು ಇದ್ದರು. ದನವನ್ನು ಟೆಂಪೋದಲ್ಲಿ ಏಕೆ ಕಟ್ಟಿಹಾಕಲಾಗಿದೆ ಎಂದು ಪ್ರಶ್ನಿಸಿದ ಕೂಡಲೇ ಟೆಂಪೋ ಚಾಲಕ ವಾಹನವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಟೆಂಪೋ ನೋಂದಣಿ ಸಂಖ್ಯೆ KA-19-B-5641 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದನವನ್ನು ವಧೆ ಮಾಡಿ ಮಾಂಸವಾಗಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಕಟ್ಟಿ ಟೆಂಪೋದಲ್ಲಿ ಸಾಗಿಸಲು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಈ ದೂರಿನ ಆಧಾರದ ಮೇಲೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2026ರಂತೆ BNS ಕಲಂ 303(2) ಜೊತೆಗೆ 3(5) ಹಾಗೂ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020ರ ಕಲಂ 5, 12ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.