ಡೈಲಿವಾರ್ತೆ:20/ಸೆ./2026

ಕಾರ್ಕಳ: ಮಾಜಿ ಸಚಿವ ರಾಮನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಪಿಎಗೆ ಗಂಭೀರ ಗಾಯ

ಕಾರ್ಕಳ: ಮಾಜಿ ಸಚಿವ ರಾಮನಾಥ ರೈ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರ ಆಪ್ತ ಸಹಾಯಕ (ಪಿಎ) ಡೆನ್ಜೆಲ್ ಅವರ ಬಲಗಾಲು ಮುರಿತಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಕಾರ್ಕಳ-ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಸಾಣೂರು ವ್ಯಾಪ್ತಿಯಲ್ಲಿ ರಾಮನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ವಿಶಾಲ್ ಕಂಪನಿಯ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ಪರಿಣಾಮ ರಾಮನಾಥ ರೈ ಅವರ ಪಿಎ ಡೆನ್ಜೆಲ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಮುರಿತವಾಗಿರುವುದಾಗಿ ತಿಳಿದುಬಂದಿದೆ. ಗಾಯಾಳುವನ್ನು ತಕ್ಷಣ ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಮಂಗಳೂರಿನ ಯೆನಪೊಯಾ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.