ಡೈಲಿವಾರ್ತೆ:21/ಸೆ./2026

ಶಿರ್ವ: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ: ನಾಲ್ವರ ಬಂಧನ – ವಾಹನ ವಶಕ್ಕೆ

ಶಿರ್ವಾ: ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕಳವು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೆ.19ರಂದು ವಸಂತಿ ಸುನೀತಾ ಕ್ವಾಡ್ರಸ್‌ ಅವರು ನಡಿಗುತ್ತು ಪ್ರದೇಶದಲ್ಲಿ ತಮ್ಮ ಐದು ದನಗಳ ಪೈಕಿ ಎರಡು ವರ್ಷದ ಕಪ್ಪು ಬಣ್ಣದ ಒಂದು ದನವನ್ನು ಮೇಯಲು ಬಿಟ್ಟಿದ್ದರು. ಬಳಿಕ ದನ ಕಾಣೆಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸುತ್ತಮುತ್ತ ಹುಡುಕಾಟ ನಡೆಸಿದಾಗ, ಸಮೀಪದಲ್ಲಿ ನಿಲ್ಲಿಸಲಾಗಿದ್ದ KA-19-B-5641 ನೋಂದಣಿ ಸಂಖ್ಯೆಯ ಟೆಂಪೋದಲ್ಲಿ ಕಾಣೆಯಾಗಿದ್ದ ದನ ಸೇರಿದಂತೆ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಪತ್ತೆಯಾಗಿದೆ.

ದೂರುದಾರರನ್ನು ಕಂಡ ಆರೋಪಿಗಳು ತಕ್ಷಣವೇ ಟೆಂಪೋ ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದರು.

ಪ್ರಕರಣದ ಹಿನ್ನೆಲೆಯಲ್ಲಿ ಸೆ.19ರಂದು ಉಮ್ಮರಬ್ಬ (64) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನು ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮೊಹಮ್ಮದ್ ಆಸೀರ್ (24) ಅವರನ್ನು ಸೆ.20ರಂದು ಕಾಪುವಿನ ಕೊಪ್ಪಲಂಗಡಿ ಪ್ರದೇಶದಲ್ಲಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ ದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರ್ವ, ಪಡುಬಿದ್ರಿ ಹಾಗೂ ಹೆಬ್ರಿ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.