




ಡೈಲಿವಾರ್ತೆ:14/ಅ./2026

ಐದು ದಿನಗಳಿಂದ ವ್ಯಕ್ತಿ ನಾಪತ್ತೆ: ಎಣ್ಣೆಹೊಳೆ
ಸೇತುವೆ ಕೆಳಗೆ ಶವ ಪತ್ತೆ!

ಅಜೆಕಾರು, ಅ. 14: ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆಯ ಕೆಳಭಾಗದಲ್ಲಿರುವ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಅ. 14ರಂದು ಪತ್ತೆಯಾಗಿದ್ದು, ಐದು ದಿನಗಳಿಂದ ನಾಪತ್ತೆಯಾಗಿದ್ದ ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿ ಸುರೇಶ್ ಶೆಟ್ಟಿ (51) ಎಂಬವರ ಮೃತದೇಹವೆಂದು ಗುರುತಿಸಲಾಗಿದೆ.
ನದಿಯಲ್ಲಿ ಶವವು ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆಯ ಕುರಿತು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮೃತರ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಶವದ ಗುರುತು ಪತ್ತೆಹಚ್ಚಿದ್ದಾರೆ.
ಸುರೇಶ್ ಶೆಟ್ಟಿ ಅವರು ಅ. 9ರ ಮಧ್ಯಾಹ್ನ ಸುಮಾರು 2 ಗಂಟೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಮನೆಯಿಂದ ಕಟೀಲಿಗೆ ತೆರಳಿದ್ದ ಅವರು, ಅಲ್ಲಿನ ಸಂಬಂಧಿಕರ ಅಂಗಡಿಯಲ್ಲಿ ತಮ್ಮ ಬ್ಯಾಗ್ ಇರಿಸಿ ಬಳಿಕ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರಿಗೆ ಇದೀಗ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ಮೃತದೇಹ ಪತ್ತೆಯಾಗಿರುವ ಸುದ್ದಿ ತಿಳಿದುಬಂದಿದೆ.
ಸೇತುವೆಯ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಈ ಸಂಬಂಧ ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.