




ಡೈಲಿವಾರ್ತೆ:23/ಅ./2026

ಮುಧೋಳ: ಕೆರೆಯಲ್ಲಿ ಆರ್ಎಸ್ಎಸ್ ದೈಹಿಕ ಶಿಕ್ಷಕನ ಶವ ಪತ್ತೆ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ದೈಹಿಕ ಶಿಕ್ಷಕರೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಧೋಳ ನಗರದಲ್ಲಿ ನಡೆದಿದೆ.
ಮೃತರನ್ನು ಪ್ರಮೋದ್ ಮಮದಾಪುರ (44) ಎಂದು ಗುರುತಿಸಲಾಗಿದೆ. ಇವರು ಜಮಖಂಡಿ ಭಾಗದಲ್ಲಿ ಆರ್ಎಸ್ಎಸ್ನ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಘದ ಕಾರ್ಯಕರ್ತರಿಗೆ ದಂಡ ಪ್ರಹಾರ, ಕರಾಟೆ ಸೇರಿದಂತೆ ವಿವಿಧ ದೈಹಿಕ ತರಬೇತಿಗಳನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ನವರಾತ್ರಿ ಆರಂಭದ ಸಂದರ್ಭದಲ್ಲಿ ಅನುಷ್ಠಾನದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದ ಪ್ರಮೋದ್ ಅವರು, ಯಾರೂ ಕರೆ ಮಾಡಬಾರದೆಂದು ಹೇಳಿ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಅವರು ನಾಪತ್ತೆಯಾಗಿದ್ದರು. ಇದೀಗ ಮುಧೋಳದಲ್ಲಿ ಕೆರೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಧೋಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಮೋದ್ ಅವರ ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.