




ಡೈಲಿವಾರ್ತೆ:22/ಅ./2026

ಮಾಬುಕಳ ಸರ್ಕಲ್ನಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಗೆ ಸೈಕಲ್ ಸವಾರ ಬಲಿ

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕಿನ ಮಾಬುಕಳ ಸರ್ಕಲ್ನಲ್ಲಿ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಕಾಪು ಕಡೆಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬಾಳ್ಕುದ್ರು ನಿವಾಸಿ ರೊನಾಲ್ಡ್ ಲೂವಿಸು (62) ಎಂದು ಗುರುತಿಸಲಾಗಿದೆ. ಅವರು ಹಂಗಾರಕಟ್ಟೆ ಅಂಚೆ ಕಚೇರಿಯಲ್ಲಿ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಗುರುವಾರ ಸಂಜೆ ರೊನಾಲ್ಡ್ ಅವರು ಸೈಕಲ್ನಲ್ಲಿ ಹಂಗಾರಕಟ್ಟೆಯಿಂದ ಮಾಬುಕಳ ಸರ್ಕಲ್ಗೆ ಬಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಕಾಪು ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರ ಬಲ ಬದಿಗೆ ಬಂದ ಲಾರಿಯು ಸೈಕಲ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಸೈಕಲ್ನಿಂದ ರಸ್ತೆಗೆ ಬಿದ್ದ ರೊನಾಲ್ಡ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಟೋಲ್ಗೇಟ್ನ ಆಂಬುಲೆನ್ಸ್ ಮೂಲಕ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ರೊನಾಲ್ಡ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.