ಡೈಲಿವಾರ್ತೆ: 02/ನ./2026

ಟ್ರಂಪ್ ನಿವಾಸದ ಸಮೀಪ ಖಾಸಗಿ ಜೆಟ್ ಪತನ: 9 ಮಂದಿ ಸಾವು!

ಫ್ಲೋರಿಡಾ, ನ. 2: ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯಲ್ಲಿ ಜನವಸತಿ ಪ್ರದೇಶದ ಸಮೀಪ ಖಾಸಗಿ ಜೆಟ್ ವಿಮಾನವೊಂದು ಪತನಗೊಂಡು ಭೀಕರ ದುರಂತ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸವಿರುವ ಪಾಮ್ ಬೀಚ್ ಪ್ರದೇಶದ ಸಮೀಪ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.

ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರೋಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್‌ನ ನಾರ್ತ್ ಎಲುಥೆರಾ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 60 ವಿಮಾನವು ನವೆಂಬರ್ 1ರಂದು ಮಧ್ಯಾಹ್ನ ಸುಮಾರು 12.50ರ ವೇಳೆಗೆ ಪಾಮ್ ಬೀಚ್ ಕೌಂಟಿಯ ಗ್ರೀನ್‌ಏಕರ್ಸ್ ಪ್ರದೇಶದಲ್ಲಿ ಪತನಗೊಂಡಿದೆ. ರಸ್ತೆಯ ಸಮೀಪ ವಿಮಾನ ನೆಲಕ್ಕೆ ಅಪ್ಪಳಿಸಿದ ತಕ್ಷಣ ಭಾರೀ ಸ್ಫೋಟ ಸಂಭವಿಸಿದ್ದು, ವಿಮಾನ ಬೆಂಕಿಗಾಹುತಿಯಾಗಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.

ಪತನಕ್ಕೂ ಮುನ್ನ ಪೈಲಟ್‌ನಿಂದ ತುರ್ತು ಕರೆ:
ವಿಮಾನ ಅಪಘಾತಕ್ಕೂ ಕೆಲವೇ ನಿಮಿಷಗಳ ಮೊದಲು ಪೈಲಟ್‌ಗಳು ಹವಾಮಾನ ವೈಪರೀತ್ಯದ ಕುರಿತು ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗುತ್ತಿದ್ದು, ತೀವ್ರ ಪ್ರಕ್ಷುಬ್ಧತೆಯಿಂದ ವಿಮಾನದ ನಿಯಂತ್ರಣಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದ್ದರು. ಬಳಿಕ ವಿಮಾನವು ವೇಗವಾಗಿ ಎತ್ತರ ಕಳೆದುಕೊಳ್ಳಲಾರಂಭಿಸಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ ‘ಮೇಡೇ’ ಕರೆ ನೀಡಿದ್ದಾರೆ. ರೇಡಿಯೋ ಸಂಭಾಷಣೆಯ ಪ್ರಕಾರ, ವಿಮಾನವು ಅತಿ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿತ್ತು. ವಿಮಾನ ನೆಲಕ್ಕೆ ಅಪ್ಪಳಿಸುವ ಆತಂಕವನ್ನೂ ಪೈಲಟ್ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ವಿಮಾನ ಪತನಕ್ಕೆ ಹವಾಮಾನ ವೈಪರೀತ್ಯವೇ ಕಾರಣವೇ ಅಥವಾ ತಾಂತ್ರಿಕ ದೋಷ ಸೇರಿದಂತೆ ಇತರ ಅಂಶಗಳು ಕಾರಣವಾಗಿವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.