


ಡೈಲಿವಾರ್ತೆ: 01/ನ./2026




ಬೆಳ್ಳಾರೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ

ಬೆಳ್ಳಾರೆ: ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಉಮೇಶ್ ಮಣಿಕರ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೋಟರಿಯನ್ ಆರಿಫ್ ಬಿ.ಎಂ., ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಪನ್ನೆ, ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ನೆಟ್ಟಾರು ಹಾಗೂ 2028-29ನೇ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ರೋಟರಿಯನ್ ಡಾ. ಸೂರ್ಯನಾರಾಯಣ ಉಪಸ್ಥಿತರಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತರಾದ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ನೆಟ್ಟಾರು ಅವರನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನಂತರ ಅವರು ಕನ್ನಡ ರಾಜ್ಯೋತ್ಸವದ ಮಹತ್ವ, ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಕುರಿತು ಉಪನ್ಯಾಸ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಪನ್ನೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕರ ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೋಟರಿಯನ್ ಆರಿಫ್ ಬಿ.ಎಂ. ಭಾಗವಹಿಸಿದ್ದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಕಾರ್ಯದರ್ಶಿ ರೋಟರಿಯನ್ ಪ್ರಶಾಂತ್ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಜ್ಞಾನದೀಪ ಶಿಕ್ಷಣ ಸಂಸ್ಥೆಯ ಅಧ್ಯಾಪಕರು ನಿರೂಪಿಸಿದರು. ಸ್ನೇಹಿತರ ಕಲಾ ಸಂಘದ ನಿಕಟಪೂರ್ವ ಅಧ್ಯಕ್ಷ ವಸಂತ ಪಡ್ಪು ವಂದಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ನ ಸರ್ವ ಸದಸ್ಯರು, ಸ್ನೇಹಿತರ ಕಲಾ ಸಂಘದ ಸರ್ವ ಸದಸ್ಯರು, ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಅಭಿಮಾನವನ್ನು ಸಾರಿದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

