


ಡೈಲಿವಾರ್ತೆ: 02/ನ./2026




ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಬೃಹತ್ ಅಲೆಗಳಿಗೆ ಸಿಲುಕಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು

ಗೋಕರ್ಣ, ನ. 2: ವಾರಾಂತ್ಯದ ರಜೆ ಕಳೆಯಲು ಗೋಕರ್ಣಕ್ಕೆ ಆಗಮಿಸಿದ್ದ ಬೆಂಗಳೂರಿನ ಐಟಿ ಸಂಸ್ಥೆಯ ಉದ್ಯೋಗಿಗಳ ತಂಡದಲ್ಲಿ ಕಡಲಿನ ಅಲೆಗಳು ದುರಂತ ಸೃಷ್ಟಿಸಿವೆ. ಸಮುದ್ರದಲ್ಲಿ ಏಕಾಏಕಿ ಎದ್ದ ಬೃಹತ್ ಅಲೆಗಳಿಗೆ ಸಿಲುಕಿ ಮೂವರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಕಡಲತೀರದಲ್ಲಿ ಈ ಘಟನೆ ಸಂಭವಿಸಿದೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ (Aloria Ecospace) ಸಂಸ್ಥೆಯ 16 ಮಂದಿ ಉದ್ಯೋಗಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ದುಬ್ಬಣಶಶಿ ಬೀಚ್ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಸದಸ್ಯರು ಕಡಲತೀರದಲ್ಲಿ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಸಮುದ್ರದ ಅಲೆಗಳಿಗೆ ಸಿಲುಕಿ ಐವರು ನೀರುಪಾಲು:
ಕಡಲತೀರದಲ್ಲಿ ವಿಹರಿಸುತ್ತಿದ್ದ ತಂಡದ ಕೆಲವರು ಸಮುದ್ರದ ನೀರಿಗೆ ಇಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳ ರಭಸಕ್ಕೆ ಐವರು ಉದ್ಯೋಗಿಗಳು ನಿಯಂತ್ರಣ ಕಳೆದುಕೊಂಡು ಸಮುದ್ರದ ಆಳಕ್ಕೆ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
ಘಟನೆ ಗಮನಿಸಿದ ರೆಸಾರ್ಟ್ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆಯ ವೇಳೆ ನಾಲ್ವರನ್ನು ಸಮುದ್ರದಿಂದ ದಡಕ್ಕೆ ಕರೆತರಲಾಯಿತು. ಆದರೆ, ಅವರಲ್ಲಿ ಮೂವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತೊಬ್ಬರು ನೀರಿನಲ್ಲಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು.
ಮೂವರು ಉದ್ಯೋಗಿಗಳ ಸಾವು:
ದುರಂತದಲ್ಲಿ ಜಾರ್ಖಂಡ್ ಮೂಲದ 22 ವರ್ಷದ ಶೋಭಾ ದಾಸ್ ಮೃತಪಟ್ಟಿದ್ದಾರೆ. ನೀರು ಕುಡಿದು ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತಂಡದ ನಾಯಕ ಮಹಮ್ಮದ್ ಅಕ್ರಮ್ ಅವರು ಅಲೆಗಳ ಹೊಡೆತಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಬೆಂಗಳೂರಿನ ಕಲ್ಯಾಣನಗರದ ನಿವಾಸಿ 24 ವರ್ಷದ ವಿಶ್ವ ಅವರು ನೀರಿನಲ್ಲಿ ನಾಪತ್ತೆಯಾಗಿದ್ದರು. ಪೊಲೀಸರು ಮತ್ತು ಜೀವರಕ್ಷಕ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ರಕ್ಷಿಸಲ್ಪಟ್ಟ ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು; ತನಿಖೆ ಆರಂಭ
ಘಟನೆಯ ಮಾಹಿತಿ ತಿಳಿದ ತಕ್ಷಣ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿದಿದೆ.
ರೆಸಾರ್ಟ್ಗಳು, ಹೋಟೆಲ್ಗಳಿಗೆ ಪೊಲೀಸರ ಎಚ್ಚರಿಕೆ:
ದುರಂತದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸರು ಕಡಲತೀರದ ಸುತ್ತಮುತ್ತಲಿನ ರೆಸಾರ್ಟ್ಗಳು, ಹೋಟೆಲ್ಗಳು ಮತ್ತು ಹೋಮ್ಸ್ಟೇಗಳ ಮಾಲೀಕರಿಗೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

