ಡೈಲಿವಾರ್ತೆ: 14/ನ./2026

ಕೋಟ: ವರುಣತೀರ್ಥ ಕೆರೆಯಲ್ಲಿ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಕೋಟ: ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಮೀಪದ ವರುಣತೀರ್ಥ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಗದಗ ಜಿಲ್ಲೆಯ ಮೂಲದ ನಾಗರಾಜ್ (38) ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರದ ಚೆನ್ನಕೇಶವ ದೇವಸ್ಥಾನದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಘಟನೆಯ ವಿವರ: ಶನಿವಾರ ಬೆಳಿಗ್ಗೆ ನಾಗರಾಜ್ ಅವರು ತಮ್ಮ ಸ್ನೇಹಿತ ರಾಹುಲ್ ಜೊತೆ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಸಮೀಪದಲ್ಲಿರುವ ವರುಣತೀರ್ಥ ಕೆರೆಯಲ್ಲಿ ಈಜಲು ನಾಗರಾಜ್ ನೀರಿಗೆ ಇಳಿದಿದ್ದರು. ಈಜು ಬಾರದ ಕಾರಣ ರಾಹುಲ್ ಕೆರೆಗೆ ಇಳಿಯದೆ ದಡದಲ್ಲೇ ನಿಂತಿದ್ದರು.

ಈಜುತ್ತಿದ್ದ ನಾಗರಾಜ್ ಅವರು ಕೆರೆಯ ಮಧ್ಯಭಾಗದಲ್ಲಿರುವ ಶಿವಲಿಂಗವನ್ನು ಮುಟ್ಟಿ ವಾಪಸ್ ಬರುವುದಾಗಿ ಹೇಳಿ ಆಳವಾದ ಪ್ರದೇಶದತ್ತ ತೆರಳಿದ್ದಾರೆ. ಆದರೆ ಕೆರೆಯ ಮಧ್ಯಭಾಗದಲ್ಲಿ ನೀರಿನ ಆಳ ಹೆಚ್ಚಾಗಿದ್ದರಿಂದ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ನಾಗರಾಜ್ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ರಾಹುಲ್ ಕೂಗಿಕೊಂಡಿದ್ದು, ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದರೂ ಅಷ್ಟರಲ್ಲಾಗಲೇ ನಾಗರಾಜ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿದ್ದರು. ಆದರೆ ಸ್ಥಳೀಯರು ಅದಕ್ಕೂ ಮೊದಲೇ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದ್ದರು.

ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬ್ರಹ್ಮಾವರಕ್ಕೆ ಸಾಗಿಸಿರುತ್ತಾರೆ.
ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.