


ಡೈಲಿವಾರ್ತೆ: 14/ನ./2026




ಶಂಕರ್ ಕುಂದರ್ಗೆ ಉನ್ನತ ಕ್ಯಾಬಿನೆಟ್ ದರ್ಜೆಯ ಅಧ್ಯಕ್ಷ ಸ್ಥಾನಕ್ಕೆ ಆಗ್ರಹ: ನಾಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮನವಿ ಸಲ್ಲಿಕೆ

ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೊಗವೀರ ಸಮುದಾಯದ ನಾಯಕ ಶಂಕರ್ ಎ. ಕುಂದರ್ ಅವರಿಗೆ ಉನ್ನತ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿ ನವೆಂಬರ್ 15ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಪಕ್ಷ ಸಂಘಟನೆಗಾಗಿ ದಶಕಗಳಿಂದ ನಿಷ್ಠೆಯಿಂದ ದುಡಿದಿರುವ ಶಂಕರ್ ಎ. ಕುಂದರ್ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಬೇಕೆಂಬ ಬೇಡಿಕೆ ಇದೀಗ ತೀವ್ರಗೊಂಡಿದೆ. ಅವರ ದೀರ್ಘಕಾಲದ ರಾಜಕೀಯ ಸೇವೆ, ಪಕ್ಷನಿಷ್ಠೆ ಹಾಗೂ ಸಂಘಟನಾತ್ಮಕ ಕೊಡುಗೆಯನ್ನು ಪರಿಗಣಿಸಿ ಉನ್ನತ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಬೆಂಬಲಿಗರ ಪ್ರಮುಖ ಆಗ್ರಹವಾಗಿದೆ.
ಈ ಹಿನ್ನೆಲೆಯಲ್ಲಿ ನಡೆಯಲಿರುವ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಶಂಕರ್ ಕುಂದರ್ ಅವರ ಬೆಂಬಲಿಗರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸುವಂತೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ.
ಇದು ಕೇವಲ ಒಬ್ಬ ನಾಯಕನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವ ಬೇಡಿಕೆಯಲ್ಲ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ನಿಷ್ಠೆಯಿಂದ ಶ್ರಮಿಸಿದ ಹಿರಿಯ ನಾಯಕರ ಸೇವೆ ಮತ್ತು ಕೊಡುಗೆಯನ್ನು ಗುರುತಿಸಿ ಅವರಿಗೆ ನ್ಯಾಯಯುತ ಗೌರವ ಹಾಗೂ ಸ್ಥಾನಮಾನ ದೊರಕಿಸಿಕೊಡಬೇಕೆಂಬ ಕಾರ್ಯಕರ್ತರ ಆಶಯವಾಗಿದೆ. ಶಂಕರ್ ಎ. ಕುಂದರ್ ಅವರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಅವರ ರಾಜಕೀಯ ಅನುಭವ ಮತ್ತು ಪಕ್ಷಕ್ಕೆ ಸಲ್ಲಿಸಿರುವ ಸೇವೆಗೆ ತಕ್ಕ ಮನ್ನಣೆ ದೊರೆಯಬೇಕು ಎಂಬುದು ಬೆಂಬಲಿಗರ ಒಕ್ಕೊರಲಿನ ನಿಲುವಾಗಿದೆ.
ಮನವಿ ಸಲ್ಲಿಕೆ ವಿವರ: ನವೆಂಬರ್ 15ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಜಿತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

