


ಡೈಲಿವಾರ್ತೆ: 15/ನ./2026




ಬೆಂಗಳೂರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಕುಂದಾಪುರ ಮೂಲದ ಯುವ ಎಂಜಿನಿಯರ್ ಲಾರಿ ಡಿಕ್ಕಿಗೆ ಬಲಿ!

ಕುಂದಾಪುರ: ಕಚೇರಿ ಕೆಲಸದ ನಿಮಿತ್ತ ಬೈಕ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬೈಂದೂರು ತಾಲೂಕಿನ ಚುಂಗಿಗುಡ್ಡೆ ಮೂಲದ ಯುವ ಎಂಜಿನಿಯರ್ರೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತಪಟ್ಟಿದ್ದಾರೆ. ಲಾರಿಯ ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಅಕ್ಷಯ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಂಜಿನಿಯರಿಂಗ್ ಪದವೀಧರರಾಗಿದ್ದ ಅಕ್ಷಯ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ತೆರಳುತ್ತಿದ್ದರು. ಅದರಂತೆ, ಈ ತಿಂಗಳ ಕಚೇರಿ ಕೆಲಸದ ನಿಮಿತ್ತ ಭಾನುವಾರ ಮುಂಜಾನೆ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ತಮ್ಮ ಮನೆಯಿಂದ ಬೈಕ್ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದರು.
ಆದರೆ, ಚನ್ನರಾಯಪಟ್ಟಣ ಸಮೀಪ ತಲುಪುತ್ತಿದ್ದಂತೆ ಸಂಭವಿಸಿದ ರಸ್ತೆ ಅಪಘಾತ ಅವರ ಬದುಕಿಗೆ ದುರಂತ ಅಂತ್ಯ ಹಾಡಿದೆ. ಯುವ ಎಂಜಿನಿಯರ್ನ ಅಕಾಲಿಕ ಸಾವು ಕುಟುಂಬಸ್ಥರು, ಬಂಧುಗಳು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

