ಡೈಲಿವಾರ್ತೆ: 17/ನ./2026

ಮಂಗಳೂರು: ಮೊಟ್ಟೆ ಸಾಗಾಟದ ವಾಹನದಲ್ಲಿ 16 ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರ ಬಂಧನ

ಮಂಗಳೂರು: ಮೊಟ್ಟೆ ಸಾಗಾಟದ ಹೆಸರಿನಲ್ಲಿ ಬಳಸಲಾಗುತ್ತಿದ್ದ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಮಂಗಳೂರು ನಗರದ ಕಂಕನಾಡಿ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದು, ವಾಹನದಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮವಾರ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಸಮೀಪದ ಉಜ್ಜೋಡಿ ಬಳಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮೊಟ್ಟೆ ಸಾಗಾಟಕ್ಕೆ ಬಳಸುವ ‘ಸ್ಟಾರ್ ಎಗ್’ ಎಂದು ನಮೂದಿಸಿರುವ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.

ವಾಹನದ ಹಿಂಭಾಗದಲ್ಲಿ ಮೊಟ್ಟೆಗಳನ್ನು ಸಾಗಿಸಲು ಬಳಸುವ ಟ್ರೇಗಳನ್ನು ಜೋಡಿಸಿಡಲಾಗಿತ್ತು. ಆದರೆ ವಾಹನದ ಒಳಭಾಗದಲ್ಲಿ 16 ಜಾನುವಾರುಗಳನ್ನು ಯಾವುದೇ ಸೂಕ್ತ ವ್ಯವಸ್ಥೆಯಿಲ್ಲದೆ, ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಿಸಲಾಗುತ್ತಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಜಾನುವಾರುಗಳನ್ನು ತರಲಾಗಿದ್ದು, ಕೇರಳದ ಕಾಸರಗೋಡಿಗೆ ಮಾಂಸಕ್ಕಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಸಂಬಂಧ ವಾಹನದ ಚಾಲಕ ಮೈಸೂರಿನ ಮಹಮ್ಮದ್ ರಫೀಕ್ ಹಾಗೂ ರೆಹಮಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ರಕ್ಷಿಸಲಾದ ಜಾನುವಾರುಗಳನ್ನು ಫಜೀರ್‌ನ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.
ಈ ಅಕ್ರಮ ಜಾನುವಾರು ಸಾಗಾಟದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸಾಗಾಟ ಜಾಲದ ಸಂಪರ್ಕ ಹಾಗೂ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.