ಡೈಲಿವಾರ್ತೆ: 21/ನ./2026

ಗೃಹಲಕ್ಷ್ಮಿ ಹಣಕ್ಕಾಗಿ 78 ವರ್ಷದ ಅಜ್ಜಿಯನ್ನೇ ಹತ್ಯೆಗೈದ ಮೊಮ್ಮಗ – ಮೃತದೇಹಕ್ಕೆ ಕಲ್ಲು ಕಟ್ಟಿ ಡ್ಯಾಂಗೆ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನ!

ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದೊರೆಯುತ್ತಿದ್ದ ಹಣವನ್ನು ನೀಡಲು ನಿರಾಕರಿಸಿದ ಕಾರಣಕ್ಕೆ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿ, ಮೃತದೇಹವನ್ನು ಘಟಪ್ರಭಾ ನದಿ ಡ್ಯಾಂ ಹಿನ್ನೀರಿಗೆ ಎಸೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು 78 ವರ್ಷದ ಹಮ್ಮವ್ವಾ ಸನದಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ಮೊಮ್ಮಗ ಭೀಮಪ್ಪ ಸನದಿ (20) ಹಾಗೂ ಕೃತ್ಯವನ್ನು ಮುಚ್ಚಿಹಾಕಲು ಸಹಕರಿಸಿದ ಆರೋಪದ ಮೇಲೆ ಮೃತಳ ಪುತ್ರ ರಾಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಮೂರುವರೆ ವರ್ಷಗಳಿಂದ ಹಣಕ್ಕಾಗಿ ಕಿರುಕುಳ:
ಹಮ್ಮವ್ವಾ ಅವರಿಗೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ಜಮೆಯಾಗುತ್ತಿತ್ತು. ಈ ಹಣವನ್ನು ತನಗೆ ನೀಡುವಂತೆ ಮೊಮ್ಮಗ ಭೀಮಪ್ಪ ಕಳೆದ ಮೂರುವರೆ ವರ್ಷಗಳಿಂದ ಅಜ್ಜಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ, ಹಣ ನೀಡಲು ಅಜ್ಜಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಭೀಮಪ್ಪ, ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ.

ನವೆಂಬರ್ 10ರಂದು ಹಮ್ಮವ್ವಾ ಅವರು ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ಆದರೆ, ಸಂಜೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದರು. ಈ ನಡುವೆ ನವೆಂಬರ್ 15ರಂದು ಜಿನರಾಳ ಗ್ರಾಮದ ಸಮೀಪದ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳನ್ನು ಕಟ್ಟಿ ಎಸೆದಿದ್ದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಈ ಸಂಬಂಧ ಮೃತಳ ಪುತ್ರಿ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಇದು ಸಹಜ ಸಾವಲ್ಲ, ಹಣದ ವಿಚಾರಕ್ಕೆ ನಡೆದ ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮೃತದೇಹ ವಿಲೇವಾರಿಗೆ ಸಂಚು:
ಕೊಲೆ ಬಳಿಕ ಅಜ್ಜಿಯ ಬಳಿಯಿದ್ದ 2,300 ರೂ. ನಗದು ಹಾಗೂ ಚಿನ್ನದ ಸರವನ್ನು ಭೀಮಪ್ಪ ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ, ಬೈಕ್‌ನಲ್ಲಿ ಸಾಗಿಸಿ ಎರಡು ದೊಡ್ಡ ಕಲ್ಲುಗಳನ್ನು ಕಟ್ಟಿ ಘಟಪ್ರಭಾ ನದಿ ಡ್ಯಾಂ ಹಿನ್ನೀರಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.
ಇನ್ನು ಕೊಲೆ ಪ್ರಕರಣದ ಮಾಹಿತಿ ಮುಚ್ಚಿಡಲು ಯತ್ನಿಸಿದ ಆರೋಪದ ಮೇಲೆ ಮೃತಳ ಪುತ್ರ ರಾಮಪ್ಪನನ್ನೂ ಪೊಲೀಸರು ಬಂಧಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ನಡೆದಿರುವ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.