


ಡೈಲಿವಾರ್ತೆ: 26/ನ./2026




ಶೋಷಿತ ಸಮುದಾಯಗಳ ಬದುಕಿಗೆ ಸಂವಿಧಾನವೇ ಜೀವಾಳ: ಶ್ಯಾಮರಾಜ್ ಬಿರ್ತಿ

ಬ್ರಹ್ಮಾವರ: ಭಾರತದ ಸಂವಿಧಾನವು ಶೋಷಿತ ಸಮುದಾಯಗಳ ಬದುಕಿಗೆ ಹೊಸ ಭರವಸೆ ಮತ್ತು ಹಕ್ಕುಗಳ ಬಲ ನೀಡಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶೋಷಿತರ ಬದುಕಿಗೆ ಉಸಿರು ಮತ್ತು ರಕ್ತ ತುಂಬಿದ ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ವಾದ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮಾವರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂವಿಧಾನವು ವಿಶೇಷವಾಗಿ ಮಹಿಳೆಯರ ಬದುಕಿನಲ್ಲಿ ಹೊಸ ಬೆಳಕಿನ ಅಧ್ಯಾಯವನ್ನೇ ತೆರೆದಿದೆ. ಆದರೆ ದುರದೃಷ್ಟವಶಾತ್ ದೇಶದ ಬಹುಸಂಖ್ಯಾತ ಮಹಿಳೆಯರಿಗೆ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಅದರ ಮಹತ್ವದ ಅರಿವು ಇನ್ನೂ ಸಮರ್ಪಕವಾಗಿ ಮೂಡಿಲ್ಲ. ಸಂವಿಧಾನದ ರಕ್ಷಣೆಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದ್ದು, ಇತರರು ನಿರ್ಲಕ್ಷಿಸಿದರೂ ದಲಿತ ಸಮುದಾಯ ಸಂವಿಧಾನದ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸಬೇಕು. ಈವರೆಗೆ ಸಂವಿಧಾನದ ಉಳಿವಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವುದು ದಲಿತ ಚಳವಳಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಸಂವಿಧಾನ ಸಮರ್ಪಣಾ ದಿನದ ಸಂದರ್ಭದಲ್ಲಿ ಸಂವಿಧಾನದ ಮೂಲ ಆಶಯಗಳು ಹಾಗೂ ಅದರ ಮೌಲ್ಯಗಳನ್ನು ಮನೆಮನೆಗೂ ತಲುಪಿಸುವ ಕಾರ್ಯ ನಡೆಯಬೇಕಿದೆ. ಸಂಘಟನೆಯ ನಾಯಕರು ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂವಿಧಾನದ ಅಸ್ತಿತ್ವ ಮತ್ತು ಆಶಯಗಳ ರಕ್ಷಣೆಗೆ ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಸಂವಿಧಾನ ಸಮರ್ಪಣೆಯಾಗಿ 77 ವರ್ಷಗಳು ಕಳೆದಿದ್ದರೂ ಅದರ ಆಶಯಗಳು ಇಂದಿಗೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಬಾಬಾಸಾಹೇಬರು ರೂಪಿಸಿದ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಪ್ರಸ್ತುತ ರಾಜಕೀಯ ವ್ಯವಸ್ಥೆ ಸೂಕ್ತ ಅವಕಾಶ ಕಲ್ಪಿಸುತ್ತಿಲ್ಲ. ಸಂವಿಧಾನದ ಶೇ.50ರಷ್ಟು ಆಶಯಗಳಾದರೂ ಸಮರ್ಪಕವಾಗಿ ಜಾರಿಯಾಗಿದ್ದರೆ ದಲಿತ ಸಮುದಾಯದ ಬದುಕಿನಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗುತ್ತಿತ್ತು ಎಂದರು.
ಇಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದುಕೊಂಡೇ ಸಂವಿಧಾನವನ್ನು ಒಪ್ಪದ ಮತ್ತು ಮನುಸ್ಮೃತಿಯೇ ನಮ್ಮ ಸಂವಿಧಾನ ಎಂದು ಪ್ರತಿಪಾದಿಸುವ ಮನಸ್ಥಿತಿಯ ಜನರಿದ್ದಾರೆ. ಇಂತಹ ಸಂವಿಧಾನ ವಿರೋಧಿ ಧೋರಣೆಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದ್ದು, ದಲಿತ ಸಮುದಾಯದ ಹಕ್ಕುಗಳು ಮತ್ತು ಜೀವದ ಘನತೆಗೂ ಧಕ್ಕೆಯುಂಟುಮಾಡುತ್ತಿವೆ. ದಲಿತ ಚಳವಳಿ ನಿರಂತರವಾಗಿ ಹೋರಾಟ ನಡೆಸದಿದ್ದರೆ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ಹಿಂದೆಯೇ ನಡೆಯುತ್ತಿದ್ದವು. ಪ್ರಸ್ತುತದ ಸಂಕೀರ್ಣ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳಿಗೆ ಯಾವುದೇ ಧಕ್ಕೆಯಾಗದಂತೆ ಅದರ ರಕ್ಷಣೆಗೆ ಸಂಘಟಿತ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಸುಮಾ ಗುಜ್ಜರಬೆಟ್ಟು, ಸುಂದರಿ ಪುತ್ತೂರು, ಸುರೇಶ್ ಹಕ್ಲಾಡಿ, ಸುರೇಶ ಬೈಂದೂರು, ರಾಜು ಬೆಟ್ಟಿನಮನೆ, ಹರೀಶ್ಚಂದ್ರ ಬಿರ್ತಿ, ಕುಮಾರ್ ಕೋಟ, ಮಂಜುನಾಥ್ ಬಾಳ್ಕುದ್ರು, ಭೋಜರಾಜ್ ಕಾವ್ರಾಡಿ, ಸುರೇಶ ಬಿರ್ತಿ, ಪ್ರಕಾಶ್ ಹೇರೂರು, ಶಿವಾನಂದ ಬಿರ್ತಿ, ವಿಜಯ ಗಿಳಿಯಾರು, ಶರತ್ ಆರೂರು, ಸದಾನಂದ ಹಂಗಾರಕಟ್ಟೆ, ನಿಖಿಲ ಬ್ರಹ್ಮಾವರ, ಚೈತನ್ಯ ಬಿರ್ತಿ ಹಾಗೂ ಸುಧಾಮ ಹಂಗಾರಕಟ್ಟೆ ಉಪಸ್ಥಿತರಿದ್ದರು.
ಶ್ಯಾಮಸುಂದರ ತೆಕ್ಕಟ್ಟೆ ಸ್ವಾಗತಿಸಿ, ಮಂಜುನಾಥ್ ನಾಗೂರು ವಂದಿಸಿದರು.

