ಡೈಲಿವಾರ್ತೆ: 26/ನ./2026

ಬ್ರಹ್ಮರಕೂಟ್ಲು ಟೋಲ್ ಗೇಟ್ ಗೆ ಎಸ್ಡಿಪಿಐ ಮುತ್ತಿಗೆ, ದಾಂಧಲೆ ಆರೋಪ, ಕಾರ್ಯಕರ್ತರ ಬಂಧನ – ಬಿಡುಗಡೆ

ಬಂಟ್ವಾಳ : ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸದೆ, ಇದೀಗ ಏಕಾಏಕಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ನಲ್ಲಿ ನೂತನ ಟೋಲ್ ಪ್ಲಾಜಾವನ್ನು ಕಾರ್ಯಾರಂಭ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಜನವಿರೋಧಿ ಕ್ರಮವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಗುರುವಾರ ಬ್ರಹ್ಮರಕೂಟ್ಲು ಟೋಲ್ ಗೇಟ್ ಗೆ ಮುತ್ತಿಗೆ ಹಾಕಲಾಯಿತು.

ಟೋಲ್‌ಗೇಟ್‌ಗೆ ದಿಡೀರ್ ನುಗ್ಗಿದ ಕಾರ್ಯಕರ್ತರು ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿ, ವಾಹನಗಳನ್ನು ಶುಲ್ಕ ಪಾವತಿಸದೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ , ಈ ವೇಳೆ ಟೋಲ್‌ನ ಕ್ಯಾಮೆರಾಗಳಿಗೆ ಹಾನಿ ಮಾಡಿದ್ದು, ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೆ, ಟೋಲ್‌ನ ಬೂಮ್ ಬ್ಯಾರಿಯರ್‌ಗಳನ್ನು ಕಿತ್ತುಹಾಕಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದರು ಎನ್ನಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕ್ಕೆ ಧಿಕ್ಕಾರ ಕೂಗಿ ಟೋಲ್ ತೆರವುಗೊಳಿಸಲು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಟೋಲ್ ಆವರಣದಲ್ಲಿದ್ದ ಎಸ್ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಲವರ ಮೇಲೆ ಪ್ರಕರಣ ದಾಖಲಿಸಿಕೊಂಡು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.