ಡೈಲಿ ವಾರ್ತೆ : 29 ಮೇ 2022

ಕಠ್ಮಂಡು: ನೇಪಾಳದ ಖಾಸಗಿ ವಾಯುಯಾನ ಸಂಸ್ಥೆ ತಾರಾ ಏರ್ಗೆ ಸೇರಿದ ವಿಮಾನವೊಂದು ಟಿಬೆಟ್ ಸಮೀಪದ ಮುಸ್ತಾಂಗ್ ಜಿಲ್ಲೆ ಸಮೀಪ ಪತನಗೊಂಡಿದ್ದು, ನಾಲ್ವರು ಭಾರತೀಯರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 22 ಮಂದಿ ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.

ರಾ ಏರ್ ವಿಮಾನವು ಮಾನಾಪತಿ ಹಿಮಾಲ್‌ನಲ್ಲಿ ಹರಿಯುವ ಲಾಮ್ಚೆ ನದಿಯಲ್ಲಿ ಪತನಗೊಂಡಿದೆ ಎಂದು ಸೇನಾಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯರು ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನಪತನಗೊಂಡ ಸ್ಥಳಕ್ಕೆ ನೇಪಾಳ ಸೇನೆಯು ಭೂ ಹಾಗೂ ವಾಯುಮಾರ್ಗವಾಗಿ ಧಾವಿಸಿದೆಯೆಂದು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ವರು ಮುಂಬೈ ಮೂಲದ ಭಾರತೀಯರು, ಇಬ್ಬರು ಜರ್ಮನರು ಹಾಗೂ ಇತರ 13 ಮಂದಿ ನೇಪಾಳಿಯರು, 9ಎನ್-ಎಇಟಿ ಮಾದರಿಯ ವಿಮಾನದಲ್ಲಿ ಪೈಲಟ್ ಸೇರಿದಂತೆ ಮೂವರು ಸಿಬ್ಬಂದಿಯಿದ್ದರು. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲವೆಂದು ಸೇನಾ ಮೂಲಗಳು ದೃಢಪಡಿಸಿವೆ.

ವಿಮಾನದುರಂತದಲ್ಲಿ ಮೃತಪಟ್ಟ ನಾಲ್ವರು ಭಾರತೀಯರನ್ನು ಮುಂಬೈ ಮೂಲದವರಾದ ಅಶೋಕ್ ಕುಮಾರ್ ತ್ರಿಪಾಠಿ, ಧನುಷ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಹಾಗೂ ವೈಭವಿ ತ್ರಿಪಾಠಿ ಎಂದು ಗುರುತಿಸಲಾಗಿದೆ.

ಈ ಕಿರುವಿಮಾನವು ಪೊಖಾರಾ ವಿಮಾನನಿಲ್ದಾಣದಿಂದ ತನ್ನ ಪ್ರಯಾಣವನ್ನು ಬೆಳಗ್ಗೆ 9.50ಕ್ಕೆ ಆರಂಭಿಸಿದ್ದು, ಅದು ಪಶ್ಚಿಮದ ಪರ್ವತಾಚ್ಛಾದಿತ ಪ್ರಾಂತದಲ್ಲಿರುವ ಜೋಯ್ಸನ್ ವಿಮಾನನಿಲ್ದಾಣದಲ್ಲಿ ಬೆಳಗ್ಗೆ 10: 15ರ ವೇಳೆಗೆ ಇಳಿಯಬೇಕಾಗಿತ್ತು. ಆದರೆ ವಿಮಾನವು ಘೋರೆಪಾನಿ ಪ್ರದೇಶವನ್ನು ತಲುಪುವ ಹೊತ್ತಿಗೆ ಸಂಪರ್ಕ ಕಳೆದುಕೊಂಡಿರುವುದಾಗಿ ನೇಪಾಳ ವಾಯುಯಾನ ಇಲಾಖೆಯ ಮೂಲಗಳು ತಿಳಿಸಿವೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರ ಕುಟುಂಬಿಕರ ಜೊತೆ ಸಂಪರ್ಕದಲ್ಲಿರುವುದಾಗಿ ತ್ರಿಭುವನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವರಿಷ್ಠರು ತಿಳಿಸಿದ್ದಾರೆ.

ಹಿಮಾಲಯ ರಾಷ್ಟ್ರವಾದ ನೇಪಾಳವು ಹಲವಾರು ವಿಮಾನ ದುರಂತಗಳಿಗೆ ಸಾಕ್ಷಿಯಾಗಿದೆ. ಪದೇ ಪದೇ ಹವಾಮಾನದಲ್ಲಿ ಬದಲಾವಣೆ ಹಾಗೂ ವಿಮಾನನಿಲ್ದಾಣಗಳು ದುರ್ಗಮವಾದ ಪರ್ವತ ಪ್ರದೇಶಗಳಲ್ಲಿರುವುದು ಆ ದೇಶದಲ್ಲಿ ವಿಮಾನ ದುರಂತಗಳಿಗೆ ಕಾರಣವಾಗಿದೆಯೆನ್ನಲಾಗಿದೆ.