ಡೈಲಿ ವಾರ್ತೆ: 16/ಮೇ /2024

ಪುಂಜಾಲಕಟ್ಟೆ:  ದ್ವಿಚಕ್ರ ವಾಹನಕ್ಕೆ ಜೀಪ್ ಡಿಕ್ಕಿ – ಸವಾರ ಗಂಭೀರ ಗಾಯ

ಬಂಟ್ವಾಳ :  ದ್ವಿಚಕ್ರ ವಾಹನಕ್ಕೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ಗುರುವಾರ ನಡೆದಿದೆ.

   ಘಟನೆಯಿಂದ ಸೋಣಂದೂರು ನಿವಾಸಿ ಮಹಮ್ಮದ್ ಅರ್ಫಾಸ್ ಗಾಯಗೊಂಡ ಯುವಕನಾಗಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಪುಂಜಾಲಕಟ್ಟೆ ಠಾಣೆಯ ಸಮೀಪವಿರುವ ನಂದಗೋಕುಲ ಮುಂಭಾಗದಲ್ಲಿ ಬಿ.ಸಿ.ರೋಡು ಬೆಳ್ತಂಗಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಹಾಲ್ ಸಮೀಪ ರಸ್ತೆಯಲ್ಲಿ ನಿಲ್ಲಿಸಲಾಗಿರುವ ಜೀಪನ್ನು ಚಾಲಕ ವಸಂತ ಶೆಟ್ಟಿ ಎಂಬವರು ಅಜಾಗರೂಕತೆಯಿಂದ ಒಮ್ಮೆಲೆ ಬಂಟ್ವಾಳ ಕಡೆಗೆ ತಿರುಗಿಸಿದಾಗ ಬಿಸಿರೋಡಿನ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರ ಅರ್ಫಾಸ್ ಅವರಿಗೆ ಡಿಕ್ಕಿಯಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡ ಅರ್ಫಾಸ್ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಕಾರಣಕ್ಕಾಗಿ ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಠಾಣಾಧಿಕಾರಿ ಉದಯರವಿ‌ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.