ಡೈಲಿ ವಾರ್ತೆ : 25 ಸೆಪ್ಟೆಂಬರ್ 2022

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಬೆಂಗಳೂರು: ಅಕ್ರಮವಾಗಿ ಆಧಾರ್‌ ಕಾರ್ಡ್‌ ಮಾಡಿಸಿಕೊಡುತ್ತಿದ್ದ ಜಾಲವನ್ನು ಭೇದಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, ನಿವೃತ್ತ ವೈದ್ಯ ಸಹಿತ 6 ಮಂದಿಯನ್ನು ಬಂಧಿಸಿದ್ದಾರೆ.



ಬೊಮ್ಮನಹಳ್ಳಿಯ ಪ್ರವೀಣ್‌, ರಮೇಶ್‌, ನಾಗರಾಜ್‌, ರೂಪಂ ಭಟ್ಟಾಚಾರ್ಜಿ, ರವಿ ಹಾಗೂ ಇನ್ನೋರ್ವ ಬಂಧಿತರು.

ಬಂಧಿತರ ಪೈಕಿ ಮೊಬೈಲ್‌ ಸೆಂಟರ್‌ ನಡೆಸುತ್ತಿದ್ದ ಪ್ರವೀಣ್‌ ಆಧಾರ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್‌ ಕಾರ್ಡ್‌ ಬೇಕಿರುವವರ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ ಸಲ್ಲಿಸುತ್ತಿದ್ದ. ಪ್ರವೀಣ್‌ ಕಳುಹಿಸುತ್ತಿದ್ದ ಅರ್ಜಿದಾರನನ್ನು ಆಟೋ ಚಾಲಕನಾಗಿದ್ದ ರಮೇಶ್‌ ಗೆಜೆಟೆಡ್‌ ಆಫೀಸರ್‌ ಬಳಿ ಕರೆದೊಯ್ಯುತ್ತಿದ್ದ. ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ವೈದ್ಯ ಆರೋಪಿ ಸುನಿಲ್‌ ಡಿ. ಅವರು ನಿವೃತ್ತಿ ಬಳಿಕವೂ ಗೆಜೆಟೆಡ್‌ ಸೀಲ್‌ ಅನ್ನು ತನ್ನಲ್ಲಿ ಇಟ್ಟುಕೊಂಡಿದ್ದ. ಪ್ರವೀಣ್‌ ಕಳಿಸಿರುವ ವ್ಯಕ್ತಿಗಳ ಅಪ್ಲಿಕೇಶನ್‌ ಪಡೆದು ಸೀಲ್‌, ಸಹಿ ಹಾಕಿ ಕೊಡುತ್ತಿದ್ದ.

ಖಾಸಗಿ ಬ್ಯಾಂಕ್‌ ಉದ್ಯೋಗಿಯಾಗಿರುವ ಆರೋಪಿ ನಾಗರಾಜ್‌ ಅಧಿಕೃತವಾಗಿ ಆಧಾರ್‌ ಪಡೆಯಲು ಬೇಕಿರುವ ಸ್ಕ್ಯಾನರ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಈ ಸ್ಕ್ಯಾನರ್‌ ಸಹಾಯದಿಂದ ನಕಲಿ ದಾಖಲಾತಿಗಳ ಸಹಿತ ಆಧಾರ್‌ ಫಾರ್ಮ್ ಅಪ್‌ಲೋಡ್‌ ಮಾಡುತ್ತಿದ್ದ.

ಒಡಿಶಾ ಮೂಲದ ಆರೋಪಿ ರೂಪಂ ಭಟ್ಟಾಚಾರ್ಜಿ ಗಾರ್ಮೆಂಟ್ಸ್‌ ನಲ್ಲಿ ಸೂಪರ್‌ವೈಸರ್‌ ಆಗಿದ್ದ. ಕೆಲವು ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ನೌಕರರ ಸಂಪರ್ಕ ಹೊಂದಿದ್ದ. ವೇತನ ಪಡೆಯಲು ನೌಕರರಿಗೆ ಆಧಾರ್‌ ಕಡ್ಡಾಯವಾಗಿದ್ದು, ಆಧಾರ್‌ಬೇಕಿರುವ ಸಿಬಂದಿಯನ್ನು ಹುಡುಕುತ್ತಿದ್ದ. ಅನಂತರ ಅಂಥವರನ್ನು ಪ್ರವೀಣ್‌ ಬಳಿಗೆ ಕಳುಹಿಸುತ್ತಿದ್ದ.

ಸರಕಾರಿ ಆಸ್ಪತ್ರೆಯ ಉದ್ಯೋಗಿ ಯಾಗಿದ್ದ ರವಿ ಎಂಬಾತನು ಕೂಡ ಆಧಾರ್‌ ಕಾರ್ಡ್‌ ಅಗತ್ಯವಿರುವವರನ್ನು ಗುರುತಿಸಿ ಪ್ರವೀಣ್‌ ಬಳಿಗೆ ಕಳಿಸಿಕೊಡುತ್ತಿದ್ದ ಎಂದು ತಿಳಿದು ಬಂದಿದೆ.
ಇದೀಗ ವಂಚಕರನ್ನು ಬಂಧಿಸಿದ ಪೊಲೀಸರು ಸೀಲ್, ಪ್ರಿಂಟಿಂಗ್ ಮೆಷಿನ್ ಸೇರಿದಂತೆ ಹಲವು ವಸ್ತು ವಶಪಡಿಸಿದ್ದಾರೆ.