ಡೈಲಿ ವಾರ್ತೆ : 25 ಸೆಪ್ಟೆಂಬರ್ 2022

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು: ಮಣಿಪಾಲ್ ಆಸ್ಪತ್ರೆಗೆ ದಾಖಲು.!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ವರದಿಂದ ಬಳಲುತ್ತಿರುವ ಎಸ್ ಎಂ ಕೃಷ್ಣ ಅವರಿಗೆ ಶನಿವಾರ ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಹಳೇ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ರಾತ್ರಿಯೇ ದಾಖಲಿಸಲಾಗಿದೆ.

ಕೃಷ್ಣ ಅವರಿಗೆ ತೀವ್ರವಾದ ಉಸಿರಾಟದ ಸೋಂಕು ಇದೆ ಎಂದು ತಿಳಿದು ಬಂದಿದ್ದು ಮೈಸೂರಿನ ಡಾ. ಸತ್ಯನಾರಾಯಣ ಮತ್ತು ಡಾ. ಸುನೀಲ್ ಕಾರಂತ್ ಅವರ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ. ತೀವ್ರ ನಿಗಾ ಮತ್ತು ವಿಶೇಷ ವೈದ್ಯಕೀಯ ತಂಡದ ಆರೈಕೆಯಲ್ಲಿ ಕೃಷ್ಣ ಇದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಎಸ್ ಎಂ ಕೃಷ್ಣ ಅವರಿಗೆ ಕೋವಿಡ್ ಮತ್ತು ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆ ಮಾಡಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.