ಡೈಲಿ ವಾರ್ತೆ: 30 ಅಕ್ಟೋಬರ್ 2022

ಸಂಪಾದಕರು: ಇಬ್ರಾಹಿಂ ಕೋಟ

84 ಲಕ್ಷ ಜೀವ ರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವಾದುದು, ಅದರಲ್ಲೂ ಬ್ರಾಹ್ಮಣ ಜನ್ಮ ಇನ್ನೂ ಶ್ರೇಷ್ಠವಾದ ಜನ್ಮ: ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ

  • ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 28ನೇ ಮಹಾಧಿವೇಶನ

ಕುಂದಾಪುರ : 84 ಲಕ್ಷ ಜೀವ ರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವಾದುದು. ಅದರಲ್ಲೂ ಬ್ರಾಹ್ಮಣ ಜನ್ಮ ಇನ್ನೂ ಶ್ರೇಷ್ಠವಾದ ಜನ್ಮವಾಗಿದೆ. ಒಂದು ದೇವಸ್ಥಾನದ ಪೂಜೆ ಮಾಡೋದೆಂದರೆ ಅದಕ್ಕಿಂತ ದೊಡ್ಡ ಜನ್ಮವೇ ಬೇಕಿಲ್ಲ ನಮಗೆ.
ಒಬ್ಬ ವ್ಯಕ್ತಿ ಒಂದು ದೇವಸ್ಥಾನಕ್ಕೆ ಕೋಟ್ಯಾಂತರ ರೂ. ದೇಣಿಗೆ ನೀಡಬಹುದು ಆದರೆ ದೇವಸ್ಥಾನದ ಗರ್ಭಗುಡಿಗೆ ಹೋಗಿ ಮೂರ್ತಿಯನ್ನು ಮುಟ್ಟಲು ಸಾಧ್ಯವಿಲ್ಲ.
ಈ ಸುಯೋಗ ಪೂಜೆ ಮಾಡುವವರಿಗೆ ಮಾತ್ರ ಇದೆ. ಇದರಿಂದಲೇ ಬ್ರಾಹ್ಮಣ ಜನ್ಮದ ಹಿರಿಮೆ ಅರಿವಾಗುತ್ತದೆ.
ಇಂತಹ ಉತ್ಕೃಷ್ಟ ಜನ್ಮದ ಸಾರ್ಥಕತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಬ್ರಾಹ್ಮಣನ ಕರ್ತವ್ಯವಾಗಿದೆ – ಎಂದು ಖ್ಯಾತ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೇಳಿದರು.

ಕುಂದಾಪುರದ ಶ್ರೀ ಕುಂದೇಶ್ವರ ದೇವಳ ಸಭಾಂಗಣದಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 2021 – 22ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ,
28ನೇ ವಾರ್ಷಿಕ ಅಧಿವೇಶನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ವಿಪ್ರ ಸನ್ಮಾನ, ಹಾಗೂ ವಿಪ್ರವಾಣಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಸಂಘಟನೆ ಮತ್ತು ಹಿಂದೂ ಐಕ್ಯತೆಯನ್ನು ಬಲಪಡಿಸುವ ಬಗ್ಗೆ ಮಾತನಾಡಿದ ಅವರು, ಇಂದು ಅನ್ಯ ಧರ್ಮಿಯರೆಲ್ಲರೂ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ನಿಷ್ಠೆಯಿಂದಲೇ ಪಾಲಿಸುತ್ತಿದ್ದಾರೆ. ಬ್ರಾಹ್ಮಣರು ಬಡವರಲ್ಲ. ಪ್ರತಿಯೊಬ್ಬ ಬ್ರಾಹ್ಮಣನೂ ತನ್ನ ಸಂಪಾದನೆಯಲ್ಲಿ ಕಿಂಚಿತ್ ಪ್ರತಿದಿನವೂ ತೆಗೆದಿರಿಸಿದರೆ, ದೊಡ್ಡ ಮೊತ್ತವನ್ನೇ ವೈದ್ಯಕೀಯ, ಶೈಕ್ಷಣಿಕ ನೆರವು ಅಥವಾ ದೇವಾಲಯಗಳಿಗೆ ದೇಣಿಗೆಯಾಗಿ ನೀಡಬಹುದು. ಇದರಿಂದ ಧರ್ಮಪಾಲನೆಯೂ ಆಗುತ್ತದೆ, ಸಂಘಟನೆಯೂ ಬಲಗೊಳ್ಳುತ್ತದೆ ಎಂದು ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಅಧ್ಯಕ್ಷ ಬಿ. ಎಸ್. ಅನಂತ ಪದ್ಮನಾಭ ಬಾಯರಿ ಬೆಳ್ವೆ ಇವರು ವಹಿಸಿದ್ದರು.

ಅವಿನಾಶ್ ಹೊಳ್ಳ ಅವರ ವೇದಘೋಷದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ
ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ನ ಅಧ್ಯಕ್ಷ ಜಿ. ಎಸ್. ಭಟ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.

ವಿಪ್ರ ಸನ್ಮಾನವನ್ನು ಕಾರ್ಯಕ್ರಮದ ಉದ್ಘಾಟಕರಾದ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜರು ವಿಪ್ರ ಸನ್ಮಾನವನ್ನು ನೆರವೇರಿಸಿದರು. ಪರಿಷತ್ ಮುಖವಾಣಿ ‘ವಿಪ್ರವಾಣಿ’ ಪ್ರಧಾನ ಸಂಪಾದಕ ಪ್ರೊ. ಶಂಕರ್ ರಾವ್ ಕಾಳಾವರ, ಹಿರಿಯ ವಕೀಲರಾದ ಮಟ್ಟಿ ಮಾಧವ ರಾವ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸುಧಾಕರ್ ಭಟ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಅರ್ಹರಿಗೆ ಸಹಾಯಧನ ವಿತರಣೆ ನಡೆಯಿತು.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸುಧಾಕರ್ ಭಟ್ ಅವರು ವಿಪ್ರವಾಣಿ ಬಿಡುಗಡೆ ಮಾಡಿದರು.

ಮಹಾಸಭೆಯ ತಿಳುವಳಿಕೆ ಪತ್ರ ಹಾಗೂ ಹಿಂದಿನ ವಾರ್ಷಿಕ ಮಹಾ ಸಭೆಯ ನಡಾವಳಿಯನ್ನು ತಾಲೂಕು ಕಾರ್ಯದರ್ಶಿ ರತ್ನಾಕರ ಉಡುಪ ಓದಿ ದಾಖಲಿಸಿದರು.

2020 – 21 ಹಾಗೂ 22ನೇ ಸಾಲಿನ ಜಮಾ ಖರ್ಚು ಮಂಡನೆಯನ್ನು ಕೋಶಾಧಿಕಾರಿ ವಿಶ್ವoಭರ ಐತಾಳ ಮಂಡಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷ ಹಾಗೂ ಕುಂದೇಶ್ವರ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಕರ್ನಾಟಕ ರಾಜ್ಯ ಬ್ರಾಹ್ಮಣ ಪರಿಷತ್ ನ ನಿರ್ದೇಶಕ ಶಿವರಾಮ ಉಡುಪ, ವಿಪ್ರವಾಣಿ ಪ್ರಧಾನ ಸಂಪಾದಕ ಶಂಕರ್ ರಾವ್ ಕಾಳಾವರ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಗೌರವಾಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಭಾವನಾಎಂ. ಭಟ್, ತಾಲೂಕು ಯುವ ವೇದಿಕೆಯ ಅಧ್ಯಕ್ಷ ಶ್ರೀಕರ ಪುರಾಣಿಕ, ಕುಂದಾಪುರ ಮಹಿಳಾ ವಲಯ ಅಧ್ಯಕ್ಷೆ ಶಶಿಕಲಾ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ರಾಘವೇಂದ್ರ ಚರಣ ನಾವುಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಉದ್ಘಾಟನಾ ಪೂರ್ವದಲ್ಲಿ ಗಣಪತಿ ಉಪನಿಷತ್ ಹೋಮ, ಮಹಿಳಾ ವೃಂದದವರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.