ಡೈಲಿ ವಾರ್ತೆ: 04/ಮೇ /2024

IPL-2024: ಗುಜರಾತ್ ವಿರುದ್ಧ ಆರ್ ಸಿಬಿಗೆ ಭರ್ಜರಿ ಜಯ – ಪ್ಲೇ ಆಫ್ ಕನಸು ಜೀವಂತ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ ಗಳ ಜಯ ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲಕ್ಕೇರಿದ್ದು ಏಳನೇ ಸ್ಥಾನಕ್ಕೆ ಬಂದಿದೆ.

ಆರ್ ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಿಗಿ ದಾಳಿ ನಡೆಸಿ ಗುಜರಾತ್ ತಂಡವನ್ನು 19.3 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಬೌಲರ್ ಗಳು ಯಶಸ್ವಿಯಾದರು. ಗುರಿ ಬೆನ್ನಟ್ಟಿದ ಆರ್ ಸಿಬಿ 13.4 ಓವರ್ ಗಲ್ಲಿ 152 ಗಳಿಸಿ  ಜಯಭೇರಿ ಬಾರಿಸಿತು.

ಆರ್ ಸಿಬಿ ಆಡಿದ 11ನೇ ಪಂದ್ಯದಲ್ಲಿ 4 ನೇ ಜಯದ ನಗು ಬೀರಿತು. ಗುಜರಾತ್ 11ನೇ ಪಂದ್ಯದಲ್ಲಿ 7 ನೇ ಸೋಲು ಕಂಡಿತು.
ಅಬ್ಬರಿಸಿದ ನಾಯಕ ಫ್ಲೆಸಿಸ್ 22 ಎಸೆತಗಳಲ್ಲಿ 64 ರನ್ ಗಳಿಸಿ ಔಟಾದರು. ಅವರು ಅಮೋಘ 10 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದರು.ವಿಲ್ ಜಾಕ್ಸ್ 1 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಾಟಿದಾರ್ ಕೂಡ 2 ರನ್ ಗೆ ನಿರ್ಗಮಿಸಿದರು.ಮ್ಯಾಕ್ಸ್ ವೆಲ್ 4 ರನ್ ಗೆ ಆಟ ಮುಗಿಸಿ ಮತ್ತೆ ವಿಫಲರಾದರು. ಕ್ಯಾಮರೂನ್ ಗ್ರೀನ್ ಕೂಡ ಒಂದೇ ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು.  92ಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಆರ್ ಸಿಬಿ ನಾಟಕೀಯ ಕುಸಿತ ಕಂಡಿತು. 117 ರನ್ ಆಗುವಷ್ಟರಲ್ಲಿ 6 ನೇ ವಿಕೆಟ್ ಕಳೆದುಕೊಂಡಿತು. ದಿನೇಶ್ ಕಾರ್ತಿಕ್ 21(12 ಎಸೆತ) , ಸ್ವಪ್ನಿಲ್ ಸಿಂಗ್ 15(9ಎಸೆತ) ರನ್ ಗಳಿಸಿ ಔಟಾಗದೆ ಉಳಿದರು. ಇನ್ನೂ 38 ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿಸಿದರು.