ಡೈಲಿ ವಾರ್ತೆ: 31 ಅಕ್ಟೋಬರ್ 2022

ಒಂದು ವರ್ಷ ಪ್ರೀತಿಸಿದ ಬಳಿಕ ಬ್ರೇಕ್ ಅಪ್ ಗೆ ಒಪ್ಪದ ಪ್ರಿಯಕರನನ್ನು ಹತ್ಯೆ ಮಾಡಿದ ಪ್ರೇಯಸಿ

ತಿರುವನಂತಪುರಂ: ಒಂದು ವರ್ಷ ಪ್ರೀತಿಸಿದ ಬಳಿಕ, ಇನ್ನು ಸಾಕು… ಬ್ರೇಕಪ್ ಮಾಡೋಣ ಎಂದ ಪ್ರೇಯಸಿಯ ಮಾತು ಕೇಳದ ಪ್ರಿಯಕರನನ್ನು ಆತನ ಗೆಳೆತಿಯೇ ವಿಷ ಕುಡಿಸಿ ಕೊಲೆಗೈದ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

ರೇಡಿಯಾಲಜಿ ವಿದ್ಯಾರ್ಥಿ, ಶರೋನ್ ರಾಜ್ (23) ವಿಷಪ್ರಾಶನದಿಂದ ಸಾವನ್ನಪ್ಪಿದ ವಿದ್ಯಾರ್ಥಿ. ಕೊಲೆ ಆರೋಪದಲ್ಲಿ ಆತನ ಸ್ನೇಹಿತೆ ಗ್ರೀಷ್ಮಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:
ಗ್ರೀಷ್ಮಾ ಮತ್ತು ಶರೋನ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿ 2022 ರಲ್ಲಿ ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ಗ್ರೀಷ್ಮಾಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ಅವರ ಮನೆಯವರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಶರೋನ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಳಲು ಆಕೆ ಮುಂದಾದಳು. ಈ ವಿಷಯವನ್ನು ಒಂದು ದಿನ ಗ್ರೀಷ್ಮಾ ಆತನಿಗೆ ಹೇಳಿ, ನಿನಗೆ ನಿನ್ನ ದಾರಿ, ನನಗೆ ನನ್ನ ದಾರಿ ಎಂದು ಹೇಳಿ ಗುಡ್ ಬೈ ಹೇಳಿದರು. ಇದರಿಂದ ಆಘಾತಗೊಂಡ ಶರೋನ್, ನಿನ್ನನ್ನು ಬಿಟ್ಟು ಇರಲಾರೆ ಎಂದು ಹೇಳಿದ್ದಾನೆ.

ಇದರಿಂದ ಆತಂಕಗೊಂಡ ಗ್ರೀಷ್ಮಾ ಕಥೆ ಕಟ್ಟಿ, ನನ್ನ ಜಾತಕದಲ್ಲಿ, ನನ್ನ ಮೊದಲ ಪತಿ ಸಾಯುತ್ತಾನೆ ಎಂದಿದೆ. ಆದ್ದರಿಂದ ನೀನಾಗಿಯೇ ನನ್ನನ್ನು ತೊರೆದು ಹೋಗು ಎಂದು ಮನವರಿಕೆ ಮಾಡಲು ಯತ್ನಿಸಿದ್ದಾಳೆ. ಆದರೆ ಶರೋನ್ ಇದಕ್ಕೆ ಒಪ್ಪಲಿಲ್ಲ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹುಚ್ಚನಂತೆ ಆಕೆಯ ಹಿಂದೆ ಬಿದ್ದಿದ್ದಾನೆ. ಗ್ರೀಷ್ಮಾ ತನ್ನನ್ನು ದೂರ ಮಾಡುತ್ತಿದ್ದಾಳೆ ಎಂದು ಶರೋನ್ ಮರುಗಿದ್ದಾನೆ.

ಇದ್ದಕ್ಕಿದ್ದಂತೆ ಅಕ್ಟೋಬರ್ 25ರಂದು ಶರೋನ್ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ವಿಷ ಸೇವನೆಯಿಂದ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ. ಇದಾದ ಬಳಿಕ ಆತನ ಕುಟುಂಬದವರು ಗ್ರೀಷ್ಮಾಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

“ತಿರುವನಂತಪುರಂ ಮೂಲದ ಶರೋನ್ ರಾಜ್ ನನ್ನು ಆತನ ಸ್ನೇಹಿತೆ ಗ್ರೀಷ್ಮಾ ಹತ್ಯೆ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು ತಿಳಿಸಿದ್ದಾರೆ.

8 ಗಂಟೆಗಳ ವಿಚಾರಣೆಯ ನಂತರ ಗ್ರೀಷ್ಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಕೆ ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಇದಕ್ಕೆ ಹುಡುಗ ಒಪ್ಪದ ಕಾರಣ ಅವನನ್ನು ವಿಷ ಕೊಟ್ಟು ಕೊಲೆ ಮಾಡಿದ್ದಾಳೆ ಎಂದು ಅವರು ತಿಳಿಸಿದರು.

ಶರೋನ್ ನನ್ನು ತನ್ನ ಮನೆಗೆ ಕರೆದು ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಕುಡಿದ ಕೂಡಲೇ ಆತ ವಾಂತಿ ಮಾಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಇದೊಂದು ವ್ಯವಸ್ಥಿತವಾಗಿ ನಡೆಸಿದ ಕೊಲೆ ಎಂದು ಅಜಿತ್ ಕುಮಾರ್ ತಿಳಿಸಿದ್ದಾರೆ