ಡೈಲಿ ವಾರ್ತೆ: 29 ನವಂಬರ್ 2022

ಸುಳ್ಯ: ವಿಳಾಸ ಕೇಳುವ ನೆಪದಲ್ಲಿ ಒಬ್ಬಂಟಿ ವೃದ್ದೆಯ ಮನೆಗೆ ನುಗ್ಗಿ ಸರ ಕಿತ್ತು ಪರಾರಿ.!

ಸುಳ್ಯ: ವಿಳಾಸ ಕೇಳುವ ನೆಪದಲ್ಲಿ ಒಬ್ಬಂಟಿ ವೃದ್ದೆಯ ಮನೆಗೆ ಕಳ್ಳನೋರ್ವ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ನ.28 ರಂದು ಬೆಳಿಗ್ಗೆ ಸುಳ್ಯ ಜಾಲ್ಸುರು ಗ್ರಾಮದ ಅಡ್ಕರ್ ಬೈತಡ್ಕ ವೈಲ್ಡ್ ಕೆಫೆ ಬಳಿ ನಡೆದಿದೆ.

ಚಿನ್ನ ಕಳೆದುಕೊಂಡ ಮಹಿಳೆ ಬೈತಡ್ಕ ನಿವಾಸಿ ದಿವಂಗತ ಶಿವರಾಯರವರ ಪತ್ನಿ ಕಮಲ (64)ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವೃದ್ಧೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೃದ್ಧ ಜಾಲ್ಸುರು ಗ್ರಾಮದ ಬೈತಡ್ಕ ಎಂಬಲ್ಲಿ ತಮ್ಮ ಮನೆಯಲ್ಲಿರುವಾಗ ಬೆಳಗ್ಗೆ ಮೋಟಾರ್ ಸೈಕಲ್ ನಲ್ಲಿ ಬಂದ ಒಬ್ಬ ವ್ಯಕ್ತಿ ಮನೆ ಅಂಗಳಕ್ಕೆ ಬಂದು ಕೆ.ಟಿ ರಾಜ ಎಂಬವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ವೃದ್ದೆ ನನಗೆ ಗೊತ್ತಿಲ್ಲ ಎಂದಾಗ, ಆತ ನಾನು ಸ್ವಲ್ಪ ಇಲ್ಲೆ ಕುಳಿತು ನನ್ನನ್ನು ಇಲ್ಲಿಗೆ ಬರಲು ಹೇಳಿರುವ ವ್ಯಕ್ತಿ ಬರುವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ನಂತರ ಕುಡಿಯಲ್ಲಿಕೆ ನೀರು ಕೇಳಿ ಮನೆಯ ಒಳಗೆ ಬಂದು ವೃದ್ದೆಯ ಕುತ್ತಿಗೆಯನ್ನು ಹಿಂದಿನಿಂದ ಹಿಡಿದು ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಹೇಳಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೀಳಲು ಪ್ರಯತ್ನಿಸಿದ್ದಾನೆ. ವೃದ್ಧೆ ಬೊಬ್ಬೆ ಹಾಕುತ್ತಾ ತನ್ನ ಚಿನ್ನದ ಸರವನ್ನು ಎರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಅರ್ಧ ಸರವನ್ನು ಕಿತ್ತುಕೊಂಡು ಆತನು ಬೈಕ್ ನಲ್ಲಿ ಜಾಲ್ಸುರ್ ಕಡೆಗೆ ಪರಾರಿಯಾಗಿದ್ದಾನೆ.

ಆತನಿಗೆ ಸುಮಾರು 26-30 ವರ್ಷ ವಯಸ್ಸು ಇದ್ದು ಎಣ್ಣೆ ಕಪ್ಪು ಮೈ ಬಣ್ಣದ ಸಾಧಾರಣ ಮೈಕ್ಕಟಿನ ಸುಮಾರು 4.5 ಅಡಿ ಎತ್ತರದ ವ್ಯಕ್ತಿಯಾಗಿದ್ದಾನೆ. ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಕೆಂಪು ಬಣ್ಣದ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾನೆ. ಮೋಟಾರ್ ಸೈಕಲ್ ಕಪ್ಪು ಬಣ್ಣದಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಿನ್ನದ ಸರವು ಒಟ್ಟು 26 ಗ್ರಾಂ ಇದ್ದು ಅದರಲ್ಲಿ 13 ಗ್ರಾಂ ನಷ್ಟು ಚಿನ್ನದ ಸರವನ್ನು ಕಳ್ಳನು ಕಿತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ಕಳ್ಳನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.