ಡೈಲಿ ವಾರ್ತೆ: 29 ಡಿಸೆಂಬರ್ 2022

ಪಠಾನ್’ ಚಿತ್ರದ ಹಾಡು, ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ನಿರ್ಮಾಪಕರಿಗೆ CBFC ಸೂಚನೆ!


ನವದೆಹಲಿ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಚಿತ್ರದ ಹಾಡುಗಳು ಸೇರಿದಂತೆ ಕೆಲವು ದೃಶ್ಯಗಳನ್ನು ಬದಲಾಯಿಸಿ, ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ ಸಿ) ಅಧ್ಯಕ್ಷ ಪ್ರಸೂನ್ ಜೋಶಿ ಗುರುವಾರ ತಿಳಿಸಿದ್ದಾರೆ.

ಚಿತ್ರದ ಹಾಡುಗಳ ಪೈಕಿ ಡಿಸೆಂಬರ್ 12 ರಂದು ಬಿಡುಗಡೆಗೊಂಡ ‘ಬೇಷರಮ್ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ನೃತ್ಯ ಮಾಡಿರುವ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ , ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾರ್ಗಸೂಚಿಯನ್ವಯ ಪಠಾಣ್ ಚಿತ್ರವು ಪೂರ್ಣ ಪ್ರಮಾಣದ ಪರಿಶೀಲನಾ ಪ್ರಕ್ರಿಯೆಗೆ ಒಳಗಾಗಿದೆ. ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ನಿರ್ಮಾಣ ಬ್ಯಾನರ್ ಯಶ್ ರಾಜ್ ಫಿಲಮ್ಸ್ ಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ಚಿತ್ರವು ಪ್ರಮಾಣೀಕರಣಕ್ಕಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪರಿಶೀಲನಾ ಸಮಿತಿಗೆ ಸಲ್ಲಿಕೆಯಾಗಿ, ಮಂಡಳಿಯ ಮಾರ್ಗಸೂಚಿಯನ್ವಯ ಪೂರ್ಣ ಪ್ರಮಾಣದ ಪರಿಶೀಲನಾ ಪ್ರಕ್ರಿಯೆಗೊಳಗಾಗಿತ್ತು.