ಡೈಲಿ ವಾರ್ತೆ: 29 ಡಿಸೆಂಬರ್ 2022

ಶಾಲೆಯ ಪರವಾನಗಿ ನವೀಕರಣಕ್ಕೆ 50,000 ರೂ. ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ

ದಾವಣಗೆರೆ: ಖಾಸಗಿ‌ ಶಾಲೆಯ ಪರವಾನಗಿ ನವೀಕರಣ ಕ್ಕೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗುರುವಾರ ಹರಿಹರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಖಾಸಗಿ ಶಾಲೆಯ ಪರವಾನಗಿ ನವೀಕರಣ ಮಾಡಿಕೊಡಲು ಹರಿಹರದ ವಿದ್ಯಾದಾಹಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರಿಂದ ಸಿದ್ದಪ್ಪ ಒಟ್ಟು ಐವತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಹತ್ತು ಸಾವಿರ ಪಡೆದಿದ್ದರು. ಗುರುವಾರ 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ಇತರೆ ಸಿಬ್ಬಂದಿ ದಾಳಿ ನಡೆಸಿ ಸಿದ್ದಪ್ಪ ಅವರನ್ನ ವಶಕ್ಕೆ ಪಡೆದರು.