ಡೈಲಿ ವಾರ್ತೆ:09 ಜನವರಿ 2023

ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆ ಎದುರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನೆ

ತೀರ್ಥಹಳ್ಳಿ : ತಾಲೂಕಿನ ಹೆದ್ದೂರು ಸಮೀಪ ಮನೆಯ ಮುಂಭಾಗ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಮರಳನ್ನು ತುಂಬಿಸಿ ಪೊಲೀಸ್ ಠಾಣೆಗೆ ತಂದು ಆ ಮನೆಯವರ ಮೇಲೆ ಕೇಸ್ ದಾಖಲಿಸಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಯನ್ನು ಕೊಡಲೇ ಅಮಾನತು ಮಾಡಬೇಕೆಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು.

ಸೋಮವಾರ ಮಾಳೂರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನೆಡೆಸಿ ಮಾತನಾಡಿದ ಅವರು ಪೊಲೀಸ್ ಅಧಿಕಾರಿಗಳು ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಮರಳನ್ನು ರಾಜಾರೋಷವಾಗಿ ಹೊಡೆದರು ಇವರಿಗೆ ಕಾಣಿಸುವುದಿಲ್ಲ. ಆದರೆ ನಮ್ಮ ಮೇಲೆ ಸುಮ್ಮನೆ ಸುಮೊಟೊ ಕೇಸ್ ಆದರೂ ದಾಖಲು ಮಾಡುತ್ತಾರೆ
ಈ ರೀತಿಯಾದ ವರ್ತನೆ ಸರಿಯಲ್ಲ ಎಂದರು.

ಇತ್ತೀಚಿಗೆ ಹೆದ್ದೂರು ಸಮೀಪ ಲೈನ್ ಮ್ಯಾನ್ ಒಬ್ಬರು ಮದ್ಯಾನ್ಹದ ವೇಳೆ ಸಾವಿಗಿಡಾದರೂ ಸಂಜೆಯವರೆಗೂ ಅಲ್ಲಿಗೆ ಪೊಲೀಸರು ಭೇಟಿ ನೀಡಿಲ್ಲ. ನಾನು ನನ್ನ ಕೈಯಲ್ಲಿದ್ದ ಐದು ಸಾವಿರ ಹಣವನ್ನು ಕೊಟ್ಟು ಬಂದಿದ್ದೆ. ಅದರಲ್ಲಿ ಒಂದು ಸಾವಿರ ಹಣ ಪೊಲೀಸರು ಕೇಳುತ್ತಾರಂತೆ. ಕಂಪ್ಲೇಂಟ್ ಕೊಡದಿದ್ದರೆ ತೆಗೆದುಕೊಳ್ಳುವುದಿಲ್ಲವಂತೆ. ಅದೇ ನಮ್ಮ ಕಾರ್ಯಕರ್ತರ ಮೇಲೆ ದೇವರು ಕೂಡ ಕಂಪ್ಲೇಂಟ್ ಕೊಡದಿದ್ದರೂ ಸುಮೊಟೊ ಕಂಪ್ಲೇಂಟ್ ದಾಖಲಿಸುತ್ತೀರಾ ? ಪೊಲೀಸ್ ಇಲಾಖೆ ಬಾಡಿಗೆಗೆ ಇದೆಯಾ ಎಂದು ವಾಗ್ದಾಳಿ ನೆಡೆಸಿದರು.

ಹೆದ್ದೂರು ಬಳಿ ಮರಳು ತುಂಬಲು ಜ್ಞಾನೇಂದ್ರ ಹೇಳಿದ್ದ ಅಥವಾ ನೀವೇ ತುಂಬಿದ್ದ ನನಗೆ ಗೊತ್ತಾಗಬೇಕು. ಆರಗದಲ್ಲಿ 14 ಜನ ಮರಳನ್ನು ಹೊಡೆಯುತ್ತಾಯಿದ್ದಾರೆ. ಅವರನ್ನು ಯಾರು ಹಿಡಿಯಲ್ಲ.ಅದೇ ನಾನು ಮಂತ್ರಿ, ಎಂ ಎಲ್ ಎ ಆದಾಗ ಜ್ಞಾನೇಂದ್ರ ಮರಳು ದಂಡೆಯನ್ನೇ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆಗಿನ ಸಮಯದಲ್ಲಿ ನಾನು ಆನೆ ಹಿಡಿಯಲಿಲ್ಲ ಅಂತ ಕೂಗುತ್ತಿದ್ದರು. ಈಗ ಆನೆ ಆಗುಂಬೆ, ಮುಗುಡ್ತಿ, ಶೆಡ್ಗಾರ್, ಕೊನೆಗೆ ಕುರುವಳ್ಳಿಗೂ ಬಂತು ಆರಗ ಜ್ಞಾನೇಂದ್ರ ನಾಪತ್ತೆಯಾಗಿದ್ದಾರೆ. ಪುಣ್ಯಕ್ಕೆ ತಾಲೂಕು ಕಚೇರಿ ಒಂದಕ್ಕೆ ಆನೆ ಬಂದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಗೃಹ ಇಲಾಖೆಗೆ ರಾಜೀನಾಮೆ ಕೊಡಿ:
ಸ್ಯಾಂಟ್ರೋ ರವಿ ಬಳಿ ಜ್ಞಾನೇಂದ್ರ ಅವರು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಎಚ್ ಡಿ ಕೆ ವಿಡಿಯೋವೊಂದನ್ನು ಬಿಟ್ಟಿದ್ದಾರೆ. ಇನ್ನು ವಿಡಿಯೋ ಬಿಡ್ತೀನಿ ಅಂತಾನೂ ಹೇಳಿದ್ದಾರೆ. ಹಾಗಾಗಿ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಡುವುದು ಒಳ್ಳೆಯದು. ಈಗಾಗಲೇ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಆರೋಪವಿದೆ ಹೀಗಾಗಿ ಗೃಹ ಇಲಾಖೆಗೆ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡುವುದು ಒಳ್ಳೆಯದು ಎಂದರು.