ಡೈಲಿ ವಾರ್ತೆ:21 ಜನವರಿ 2023

ನಾಪತ್ತೆಯಾದ ಭಿನ್ನ ಕೋಮಿನ ಜೋಡಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಭಿನ್ನ ಕೋಮಿಗೆ ಸೇರಿದ ಜೋಡಿ ವಸತಿಗೃಹದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ

ರಾಜಪುರ ಕಳ್ಳಾರು ಒಕ್ಲಾವಿನ ಕೆ.ಎಂ. ಮೊಹಮ್ಮದ್‌ ಶರೀಫ್‌(40) ಮತ್ತು ಕಳ್ಳಾರು ಅಡಕಂ ಪುಲಿಕುಳಿಯ ಸಿಂಧು (36) ಮೃತರು.

ಜ. 7ರಂದು ಅವರಿಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಮನೆಯವರು ನೀಡಿದ ದೂರಿನಂತೆ ರಾಜಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಶೋಧ ನಡೆಸುತ್ತಿದ್ದರು. ಈ ಇಬ್ಬರು ಗುರುವಾಯೂರು ಪಡಿಞಾರ ನಡೆಯ ಖಾಸಗಿ ವಸತಿಗೃಹವೊಂದರ ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರಿಬ್ಬರು ಬುಧವಾರ ಈ ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದರು. ಜ. 19ರ ಮಧ್ಯಾಹ್ನವಾದರೂ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿದ ವಸತಿಗೃಹದವರು ಕಿಟಕಿ ಬಾಗಿಲು ತೆರೆದು ನೋಡಿದಾಗ ಅವರಿಬ್ಬರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾವನ್ನಪ್ಪಿದ ಸಿಂಧು ವಿವಾಹಿತಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮೊಹಮ್ಮದ್‌ ಶರೀಫ್‌ ಕೂಡ ವಿವಾಹಿತನಾಗಿದ್ದು ಮೂವರು ಮಕ್ಕಳಿದ್ದಾರೆ. ಮೊಹಮ್ಮದ್‌ ಶರೀಫ್‌ ಆಟೋ ಚಾಲಕನಾಗಿದ್ದಾನೆ. ರಾಜಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.