



ಡೈಲಿ ವಾರ್ತೆ:21 ಜನವರಿ 2023


29 ಅಡಿ ಎತ್ತರದ ಮೊಬೈಲ್ ಟವರನ್ನೇ ಕದ್ದೊಯ್ದ ಖದೀಮರು!
ಪಾಟ್ನಾ: ದೂರಸಂಪರ್ಕ ಕಂಪನಿಯ ತಂತ್ರಜ್ಞರ ಸೋಗಿನಲ್ಲಿ ಬಂದು 29 ಅಡಿ ಎತ್ತರದ ಮೊಬೈಲ್ ಟವರನ್ನೇ ಕದ್ದೊಯ್ದ ಘಟನೆ ಬಿಹಾರದ ಸಬ್ಜಿಬಾಘ್’ನಲ್ಲಿ ನಡೆದಿದೆ.
ಖದೀಮರು ಕದ್ದೊಯ್ದ ಈ ಟವರ್ ಜಿಟಿಎಲ್ ಕಂಪನಿಗೆ ಸೇರಿದ್ದಾಗಿದ್ದು, ಕಂಪನಿಯ ತಂತ್ರಜ್ಞರು ತಮ್ಮ ಕಂಪನಿಯ ಸಾಧನಗಳು ಎಲ್ಲೆಲ್ಲಿವೆ ಎಂದು ಸಮೀಕ್ಷೆ ಮಾಡುವಾಗ, ಈ ಟವರ್ ಕಾಣೆಯಾಗಿತ್ತು.
ಈ ಟವರ್ ಅನ್ನು ಶಹೀನ್ ಖಯೂಮ್ ಎಂಬವರಿಗೆ ಸೇರಿದ ನಾಲ್ಕು ಅಂತಸ್ತಿನ ಮನೆ ಮೇಲೆ ಸ್ಥಾಪಿಸಲಾಗಿತ್ತು. “ನಾವು ದೂರಸಂಪರ್ಕ ಕಂಪನಿಯ ತಂತ್ರಜ್ಞರು. ಟವರ್‌ನಲ್ಲಿ ಸಮಸ್ಯೆಯಿದೆ, ಹೊಸತನ್ನು ಹಾಕುತ್ತೇವೆ” ಎಂದು ಕೆಲವರು ಬಂದು ಟವರ್ ಅನ್ನು ತೆಗೆದುಕೊಂಡು ಹೋಗಿರುವುದಾಗಿ ಎಂದು ಶಹೀನ್ ಖಯೂಮ್ ತಿಳಿಸಿದ್ದಾರೆ.
ಜಿಟಿಎಲ್‌ನ ನೈಜ ತಂತ್ರಜ್ಞರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಏರ್‌ಸೆಲ್ ಕಂಪನಿಯ ಒಡೆತನದಲ್ಲಿದ್ದ ಈ ಟವರ್ ಅನ್ನು 2016ರಲ್ಲಿ ಜಿಟಿಎಲ್ ಖರೀದಿ ಮಾಡಿತ್ತು.