ಡೈಲಿ ವಾರ್ತೆ: 26 ಜನವರಿ 2023
ರಾಜಧಾನಿಗೆ ಕಾಲಿಟ್ಟ ಖೋಟಾ-ನೋಟು ಹಾವಳಿ: 1 ಅಸಲಿ 500 ರೂ.ಕೊಟ್ಟರೆ, 3 ನಕಲಿ ನೋಟು!
ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ರಾಜಧಾನಿಗೆ ಹೊರ ರಾಜ್ಯಗಳಿಂದ ಖೋಟಾ-ನೋಟುಗಳು ಕಾಲಿಟ್ಟಿದ್ದು, ಇದಕ್ಕೆ ಸಾಕ್ಷಿ ಎಂಬಂತೆ 10.34 ಲಕ್ಷ ರೂ. ಮೌಲ್ಯದ ಖೋಟಾ-ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಆಂಧ್ರ ಮೂಲದ ನಾಲ್ವರ ಗ್ಯಾಂಗ್ ಸುಬ್ರಹ್ಮಣ್ಯಪುರ ಪೊಲೀಸರ ಬಲೆಗೆ ಬಿದ್ದಿದೆ.
ಆಂಧ್ರಪ್ರದೇಶ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು ರಾಜ, ರಜನಿ, ಗೋಪಿನಾಥ್ ಬಂಧಿತರು. ಆರೋಪಿಗಳಿಂದ 500 ರೂ. ಮುಖಬೆಲೆಯ 10.34 ಲಕ್ಷ ರೂ. ಮೌಲ್ಯದ ಖೋಟಾನೋಟುಗಳನ್ನು ಜಪ್ತಿ ಮಾಡಲಾಗಿದೆ.
ಜ.19ರಂದು ಮಧ್ಯಾಹ್ನ 1.30ರಲ್ಲಿ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣಪ್ರಜ್ಞಾ ಲೇಔಟ್ ಬಳಿ ಬೊಲೆರೊ ಜೀಪ್‌ನಲ್ಲಿಆರೋಪಿಗಳಾದ ಚರಣ್ ಹಾಗೂ ರಜಿನಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದರು.
ಆರೋಪಿಗಳಿಗೆ 500 ರೂ. ಮುಖಬೆಲೆಯ 1 ಅಸಲಿ ನೋಟು ಕೊಟ್ಟರೆ, 3 ನಕಲಿ ನೋಟು ಕೊಡುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿಮೇರೆಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ದಾಳಿ ನಡೆಸಿ ಚರಣ್ ಹಾಗೂ ರಜನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ 500 ರೂ. ಮುಖಬೆಲೆಯ 4.9 ಲಕ್ಷ ರೂ. ಮೌಲ್ಯದ 818 ಖೋಟಾ ನೋಟು ಪತ್ತೆಯಾಗಿತ್ತು.
ಜ.20ರಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಕಂಪ್ಯೂಟರ್ ಸಹಾಯದಿಂದ ಅಸಲಿ ನೋಟಿನ ಮಾದರಿಯಲ್ಲೇ ನಕಲಿ ನೋಟಿನ ಚಿತ್ರ ತಯಾರಿಸುತ್ತಿದ್ದೆವು. ಅದನ್ನು ಪ್ರಿಂಟ್ ತೆಗೆದು ಚಲಾವಣೆ ಮಾಡಲು ಯತ್ನಿಸುತ್ತಿದ್ದೆವು ಎಂದು ಆರೋಪಿ ಚರಣ್ ಬಾಯ್ಬಿಟ್ಟಿದ್ದ.
ಇದರ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು ಚರಣ್‌ನನ್ನು ಕರೆದುಕೊಂಡು ಆಂಧ್ರದ ಅನಂತಪುರದಲ್ಲಿ ಆತ ಹೇಳಿದ ಬಾಡಿಗೆ ಮನೆಗೆ ಹೋಗಿದ್ದರು. ಅಲ್ಲಿ ಇತರ ಆರೋಪಿಗಳಾದ ಪುಲ್ಲಲರೇವು ರಾಜ, ಗೋಪಿನಾಥ್ ಸಿಕ್ಕಿ ಬಿದ್ದಿದ್ದರು. ನಂತರ ಆತ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಯಲ್ಲಿ ಶೋಧಿಸಿದಾಗ 6.25 ಲಕ್ಷ ರೂ. ಖೋಟಾ ನೋಟು ಪತ್ತೆಯಾಗಿತ್ತು.
ಇದುವರೆಗೆ ಒಟ್ಟು 14 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದು, ಈ ಪೈಕಿ 3 ಲಕ್ಷ ರೂ. ಮೌಲ್ಯದ ಖೋಟಾ-ನೋಟು ಚಲಾವಣೆ ಮಾಡಿರುವುದಾಗಿ ಚರಣ್ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಂದ ನಕಲಿ ನೋಟುಗಳನ್ನು ಖರೀದಿಸಿದವರಿಗೆ ಶೋಧ ನಡೆಸುತ್ತಿದ್ದಾರೆ.
ನೋಟು ಪಡೆಯುವಾಗ ಎಚ್ಚರವಹಿಸಿ : ನಗರದಲ್ಲಿ ಈಗಾಗಲೇ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಹಲವು ಗ್ಯಾಂಗ್ ರಾಜ್ಯ ಪೊಲೀಸರ ಬಲೆಗೆ ಬಿದ್ದಿವೆ. ಆರೋಪಿಗಳು ಬಂಧನಕ್ಕೊಳಗಾಗುವ ಮೊದಲು ಹಲವು ಖೋಟಾ-ನೋಟು ಚಲಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಾರ್ವಜನಿಕರು ನೋಟುಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗಿದೆ.