ಡೈಲಿ ವಾರ್ತೆ: 31 ಜನವರಿ 2023

ದಕ್ಷಿಣ ಕನ್ನಡ: ಮೊಬೈಲ್ ಬಳಸಿದ್ದಕ್ಕೆ ಅಮ್ಮ ಬೈದರೆಂದು 14 ವರ್ಷದ ಬಾಲಕ ಆತ್ಮ ಹತ್ಯೆಗೆ ಶರಣು!

ಮಂಗಳೂರು: ಮೊಬೈಲ್ ಬಳಸಿದ್ದಕ್ಕೆ ಅಮ್ಮ ಬೈದರೆಂದು ನೊಂದುಕೊಂಡ 14 ವರ್ಷದ ಬಾಲಕ ಸಾವಿಗೆ ಶರಣಾದ ಘಟನೆ ಮಂಗಳೂರು ನಗರದ ಪದವು ಬಿ ಗ್ರಾಮದ ಕೋಟಿಮುರ ಎಂಬಲ್ಲಿ ನಡೆದಿದೆ.

ಜ್ಞಾನೇಶ್ (14 ವರ್ಷ) ಮೃತಪಟ್ಟ ಬಾಲಕನಾಗಿದ್ದು, ಈತ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಕೋಟಿಮುರದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಜಗದೀಶ್ ಹಾಗೂ ವಿನಯ ದಂಪತಿ ಮಗನಾದ ಜ್ಞಾನೇಶ್ ತುಂಟನಾಗಿದ್ದ. ಮೊಬೈಲ್ ಬಳಸುವ ವಿಚಾರವಾಗಿ ಮನೆಯಲ್ಲಿ ಈತನಿಗೆ ತಾಯಿ ಸ್ವಲ್ಪ ಗದರಿಸಿದ್ದರು ಎಂಬ ಕಾರಣಕ್ಕೆ ಬೇಸರದಲ್ಲಿದ್ದ.

ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದವನು ಅನೇಕ ಸಮಯದವರೆಗೂ ಹೊರಗೆ ಬರಲಿಲ್ಲ. ಸಂಶಯಗೊಂಡ ಈತನ ತಂದೆ ಬಾತ್ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ತಕ್ಷಣ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿರುವುದು ತಿಳಿದುಬಂದಿದೆ.