ಡೈಲಿ ವಾರ್ತೆ:25 ಫೆಬ್ರವರಿ 2023
ಕಾರ್ಕಳ: ಶಿವತಿಕೆರೆ ದೇವಸ್ಥಾನ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಸುರೇಂದ್ರ ಶೆಟ್ಟಿ ಸೇರಿ ನಾಲ್ವರು ರಾಜೀನಾಮೆ
ಕಾರ್ಕಳ : ತಾಲೂಕಿನ ಹಿರಿಯಂಗಡಿಯ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಸುರೇಂದ್ರ ಶೆಟ್ಟಿ ಸೇರಿ ನಾಲ್ಕು ಮಂದಿ ರಾಜಿನಾಮೆ ನೀಡಿದ್ದಾರೆ.
ಸುರೇಂದ್ರ ಶೆಟ್ಟಿ ಅವರೊಂದಿಗೆ ಸುಧಾಕರ್ ಶೆಟ್ಟಿ, ದಯಾನಂದ ಮೊಯ್ಲಿ, ಸುದೇಶ್ ರಾವ್ ರಾಜೀನಾಮೆ ನೀಡಿದ್ದು, ಈ ಅನಿರೀಕ್ಷಿತ ಬೆಳವಣಿಗೆ ಜನರನ್ನು ಬಾರೀ ಆಶ್ಚರ್ಯ ಮೂಡಿಸಿದೆ. ಹೌದು ಕಳೆದ 7 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಸುರೇಂದ್ರ ಏಕಾಏಕಿ ತನ್ನ ಮೇಲೆ ಅಪವಾದಗಳಿಂದ ಬೇಸತ್ತು ಮೊಕ್ತೇಸರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಸಂದರ್ಭ ದೇವಸ್ಥಾನದ ಕೀಯನ್ನು ಹಸ್ತಾಂತರಿಸುವಾಗ ಕಣ್ಣೀರಿಟ್ಟು ಹೊರ ಬಂದಿದ್ದಾರೆ.
ಸುರೇಂದ್ರ ಶೆಟ್ಟಿ ಅವರು ಕಳೆದ 7 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕ್ತೇರಸನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹೀಗಿರುವಾಗ ಸುರೇಂದ್ರ ಶೆಟ್ಟಿ ದಿಢೀರ್ ರಾಜೀನಾಮೆಗೆ ಕಾರಣಗಳೇನು ಎಂಬುದಾ ಕುರಿತು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ.
ಇನ್ನು ಈ ಬಗ್ಗೆ ಸುರೇಂದ್ರ ಶೆಟ್ಟಿಯೇ ಅವರೇ ಪ್ರತಿಕ್ರಿಯೆ ನೀಡಿ, ದೇವಸ್ಥಾನಕ್ಕೆ ನಾನು ತನು, ಮನದಿಂದ ಸೇವೆ ಮಾಡಿ ಸರ್ವಸ್ವವನ್ನೂ ಅರ್ಪಿಸಿದ್ದೇನೆ. ಹಿಂದುತ್ವವನ್ನು ಯಾರಿಂದಲೂ ಕಲಿಯುವ ಅಗತ್ಯ ಇಲ್ಲ. ಆದರೆ ಒಟ್ಟಿಗೆ ಇದ್ದುಕೊಂಡು ನನ್ನ ವಿರುದ್ಧ ಪಿತೂರಿ ಮಾಡಿದವರಿಂದ ನೋವಾಗಿದೆ ಅಷ್ಟೇ. ದೇವಸ್ಥಾನದ ವಿಚಾರದಲ್ಲಿ ನಾನು ಎಂದಿಗೂ ಪ್ರಚಾರ ಬಯಸಲಿಲ್ಲ. ಯಾರಿಗೂ ಅಪಚಾರವನ್ನೂ ಮಾಡಿಲ್ಲ. ಆದರೆ ನನ್ನ ಮೇಲೆ ವಿನಾಕಾರಣ ಆರೋಪಗಳನ್ನು ಹೊರಿಸುವಾಗ ನಾನು ಅಲ್ಲಿಂದ ಹೊರಬರುವುದೇ ಸೂಕ್ತ ಎಂದು ಹೊರಬಂದಿದ್ದೇನೆ. ದೇವಸ್ಥಾನದ ಆವರಣದ ಒಳಗಡೆ ರಾಜಕೀಯ ಬೇಡ, ದೇವಸ್ಥಾನದ ಪಾವಿತ್ರ್ಯತೆಗೆ ದಕ್ಕೆ ಬರುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ ಎಂದು ತಿಳಿಸಿದ್ದಾರೆ.
ಇತ್ತ ಸುರೇಂದ್ರ ಶೆಟ್ಟಿ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರನಾಗಿ ಸೇರಿದಮೇಲೆ ದೇವಸ್ಥಾನದ ಕೆಲಸಕಾರ್ಯಗಳಿಗೆ ವೇಗ ಸಿಕ್ಕಿತ್ತು. ದೇವಸ್ಥಾನದಲ್ಲಿ ಅಷ್ಟಮಂಗಲದಿಂದ ನಡೆದು ದೇವಸ್ಥಾನ ಜೀರ್ಣೋದ್ಧಾರಗೊಂಡು ಅತಿರುದ್ರ ಮಹಾಯಾಗವೂ ನಡೆದಿತ್ತು, ಇದರಿಂದ ಸುರೇಂದ್ರ ಶೆಟ್ಟಿ ಅವರಿಗೆ ಸಿಕ್ಕ ಮನ್ನಣೆ ಒಂದು ವರ್ಗಕ್ಕೆ ಸಹಿಸಲು ಸಾಧ್ಯವಾಗಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿದೆ.
ಮತ್ತೊಂದೆಡೆ ಸುರೇಂದ್ರ ಶೆಟ್ಟಿ ಈ ಭಾರಿಯ ಕಾರ್ಕಳ ಕಾಂಗ್ರೆಸ್ ನ ಟಿಕೆಟ್ ಆಕಾಂಕ್ಷಿ ಎನ್ನಲಾಗಿದ್ದು, ಬಂಟ ಸಮುದಾಯಕ್ಕೆ ಸೇರಿದ ಸುರೇಂದ್ರ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಟಿಕೆಟ್ ಸಿಗಬಹುದು ಎಂದೂ ಹೇಳಲಾಗುತ್ತಿದೆ.