ಡೈಲಿವಾರ್ತೆ:18/ಮಾರ್ಚ್/2026

ಬಂಟ್ವಾಳದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಮಾ. 20 ರಂದು “ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ” ಚಿಂತನೆ

ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಜಾದ್ ಭವನದಲ್ಲಿ “ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ ಒಂದು ಚಿಂತನೆ” ಎಂಬ ವಿಷಯಾಧಾರಿತ ರಾಷ್ಟ್ರೀಯ ವಿಚಾರ ಸಂಕಿರಣವು ಮಾರ್ಚ್ 20ರಂದು ನಡೆಯಲಿದೆ ಎಂದು ಪುತ್ರೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ನಾಲ್ಕು ಗೋಷ್ಠಿಗಳು ನಡೆಯಲಿವೆ.
ಮೊದಲ ಗೋಷ್ಠಿಯಲ್ಲಿ “ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕುನೋಟ” ವಿಷಯದ ಕುರಿತು ಪ್ರಾಧ್ಯಾಪಕಿ ಡಾ. ಆರತಿ ವಿ.ಬಿ ಮಾತನಾಡಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ “ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ವಸಾಹತುಭಾವದಿಂದ ಮುಕ್ತವಾಗುವತ್ತ” ವಿಷಯದ ಬಗ್ಗೆ ಮಾಜಿ ಶಾಸಕ ರಾಜೀವ ಕುಡಚಿ ವಿಚಾರ ಮಂಡಿಸಲಿದ್ದಾರೆ.
ಮೂರನೇ ಗೋಷ್ಠಿಯಲ್ಲಿ “ಶಿಕ್ಷಣ ಮತ್ತು ಇತಿಹಾಸದ ಮೇಲೊಂದು ಚರ್ಚೆ” ಕುರಿತು ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡಲಿದ್ದು, ನಾಲ್ಕನೇ ಗೋಷ್ಠಿಯಲ್ಲಿ ಮುಕ್ತಚಿಂತನೆ ನಡೆಯಲಿದ್ದು, ಸಮಾರೋಪದಲ್ಲಿ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್ ಅವರು ಮಾತಾನಾಡಲಿದ್ದಾರೆ.

ಕಳೆದ 12 ವರ್ಷಗಳಿಂದ ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಚಿಂತನ ಮಂಥನ ನಡೆಸುತ್ತಿರುವುದಾಗಿ ಡಾ. ಪ್ರಭಾಕರ ಭಟ್ ತಿಳಿಸಿದ್ದಾರೆ.
ವಸಾಹತುಶಾಹಿ ಮನೋಭಾವದಿಂದ ಹೊರಬಂದು ಸ್ವದೇಶಿ ಚಿಂತನೆ, ಸಂಸ್ಕೃತಿ ಮತ್ತು ಆತ್ಮಸಮ್ಮಾನವನ್ನು ಬೆಳೆಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಶುಮಂದಿರದಿಂದ ಪದವಿ ಕಾಲೇಜಿನವರೆಗೆ ಸಂಸ್ಕಾರಯುತ ಶಿಕ್ಷಣದ ಜೊತೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವಪೀಳಿಗೆಯಲ್ಲಿ ಸಮಾಜಪ್ರಜ್ಞೆ ಬೆಳೆಸುವ ಉದ್ದೇಶದಿಂದ ಪ್ರತಿ ತಿಂಗಳು ಚಿಂತನ ಕೂಟ ಹಾಗೂ ವರ್ಷಕ್ಕೊಮ್ಮೆ ವಿಚಾರ ಸಂಕಿರಣ ಆಯೋಜನೆ ಮಹತ್ವದ್ದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಹಾಗೂ ಸಂಚಾಲಕಿ ಲಕ್ಷ್ಮೀ ರಘುರಾಜ್ ಉಪಸ್ಥಿತರಿದ್ದರು.