ಡೈಲಿವಾರ್ತೆ:18/ಮಾರ್ಚ್/2026

ಸಂವಿಧಾನ ವಿರೋಧಿ ಕೃತ್ಯ: ಶ್ರೀಕಾಂತ್ ಶೆಟ್ಟಿಯನ್ನು ತಕ್ಷಣ ಬಂಧಿಸಿ – ಸುಂದರ ಮಾಸ್ತರ್ ಆಗ್ರಹ

ಉಡುಪಿ: ಜಿಲ್ಲೆಯ ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀಕಾಂತ್ ಶೆಟ್ಟಿಯನ್ನು ತಕ್ಷಣ ಬಂಧಿಸಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಧರ್ಮವನ್ನು ಆಚರಿಸುವ ಹಾಗೂ ಪ್ರಚಾರ ಮಾಡುವ ಹಕ್ಕನ್ನು ನೀಡಿದೆ. ಇಂತಹ ಹಕ್ಕುಗಳಿಗೆ ಅಡ್ಡಿಪಡಿಸುವುದು ಕಾನೂನು ವಿರೋಧಿಯಾಗಿದ್ದು, ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಕಾರ್ಕಳದಲ್ಲಿ ಪ್ರಾರ್ಥನಾ ಮಂದಿರಕ್ಕೆ ಅತಿಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದ ಘಟನೆ ಉಲ್ಲೇಖಿಸಿದ ಅವರು, ಇದೇ ವ್ಯಕ್ತಿ ಮತ್ತೆ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿದ್ದಾರೆ. ಇಂತಹ ಕೃತ್ಯಗಳನ್ನು ನಿಯಂತ್ರಿಸದಿದ್ದಲ್ಲಿ ಉಡುಪಿ ಜಿಲ್ಲೆಯಲ್ಲೂ ಕೋಮು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುವರಿಯಾಗಿ, ಸಮಾಜದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಅವರು, ನಿಜವಾದ ಮೌಢ್ಯ ಯಾವುದು ಎಂಬುದರ ಬಗ್ಗೆ ಚಿಂತನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ನೆಮ್ಮದಿಯ ಸಹಬಾಳ್ವೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೋಮು ದ್ವೇಷ ಅಥವಾ ಪ್ರಚೋದನೆಗೆ ಅವಕಾಶ ನೀಡಬಾರದು. ಎಲ್ಲಾ ಧರ್ಮದ ಜನರು ತಮ್ಮ ತಮ್ಮ ಆಚರಣೆಗಳನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಹಾಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ಸಾರ್ವಜನಿಕವಾಗಿ ಆಯುಧ ಪ್ರದರ್ಶನ ನಡೆಸುವಂತಹ ಘಟನೆಗಳನ್ನೂ ಗಂಭೀರವಾಗಿ ಪರಿಗಣಿಸಿ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಶ್ರೀಕಾಂತ್ ಶೆಟ್ಟಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಸುಂದರ ಮಾಸ್ತರ್ ಹಾಗೂ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಒತ್ತಾಯಿಸಿದ್ದಾರೆ.