

ಡೈಲಿವಾರ್ತೆ:17/ಮಾರ್ಚ್/2026


ಮಂಗಳೂರು: ಭೂ ವ್ಯವಹಾರದ ವ್ಯಾಜ್ಯ – ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಿ ಕೊಲೆ ಯತ್ನ, ಆರೋಪಿ ಬಂಧನ

ಮಂಗಳೂರು: ಭೂ ವ್ಯವಹಾರದ ಹಳೆಯ ಹಗೆತನದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಮಂಗಳವಾರ (ಮಾ. 17) ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಗಾಯಗೊಂಡ ವ್ಯಕ್ತಿ. ಇವರಿಗೂ ಆರೋಪಿ ಮಹಮ್ಮದ್ ಶರೀಫ್ ಮತ್ತು ಆತನ ತಂದೆ ಮಹಮ್ಮದ್ ಇಕ್ಬಾಲ್ ಅವರ ನಡುವೆ ಭೂ ವ್ಯವಹಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಸುರತ್ಕಲ್‌ನ ಕಾನ ಮತ್ತು ವಾಮಂಜೂರಿನಲ್ಲಿ ಭೂಮಿಗಾಗಿ ಆರೋಪಿಯು ಸುಮಾರು 2 ಕೋಟಿ ರೂ. ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಈ ವ್ಯವಹಾರದಲ್ಲಿ ಮೋಹನ್ ದಾಸ್ ಶೆಟ್ಟಿ ಅವರು ತಮಗೆ ಮೋಸ ಮಾಡಿದ್ದಾರೆ ಎಂಬ ಆಕ್ರೋಶ ಶರೀಫ್‌ಗೆ ಇತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಗರದ ಆರ್ಯ ಸಮಾಜ ರಸ್ತೆಯ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆರೋಪಿ ಶರೀಫ್ ಮೋಹನ್ ದಾಸ್ ಅವರ ಮೊಬೈಲ್ ಕಸಿದುಕೊಂಡಿದ್ದ ಎನ್ನಲಾಗಿದೆ.
ಬಳಿಕ ಮೋಹನ್ ದಾಸ್ ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಬೆನ್ನಟ್ಟಿಕೊಂಡು ಬಂದ ಆರೋಪಿ ಶರೀಫ್ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗಿ ಚಲಾಯಿಸಿ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ಮೋಹನ್ ದಾಸ್ ಅವರು ರಸ್ತೆಗೆ ಬಿದ್ದಿದ್ದು, ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮಹಮ್ಮದ್ ಶರೀಫ್‌ನನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.