ಡೈಲಿ ವಾರ್ತೆ:08 ಏಪ್ರಿಲ್ 2023

ದಕ್ಷಿಣಕನ್ನಡ: ಪಿಕಪ್ ವಾಹನ ಕಳವು ಪ್ರಕರಣ – ಅಂತರಾಜ್ಯ ವಾಹನ ಚೋರನ ಬಂಧನ

ಉಳ್ಳಾಲ: ಕೋಟೆಕಾರು ರಾ.ಹೆ 66ರ ಬಳಿಯಿಂದ ಪಿಕಪ್ ವಾಹನ ಕಳವು ನಡೆಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ನಡೆಸಿದ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಕೇರಳ ಮೇಲ್ಪರಂಬ ಮಾಂಗಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ.
ಜ.3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು. ಈ ಕುರಿತು ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದಾಗ, ಆರೋಪಿ ರಮ್ಸಾನ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ. ಆರೋಪಿ ವಿರುದ್ದ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ಇವೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಎಸ್.ಐ ಕೃಷ್ಣ ಕೆ.ಹೆಚ್, ಸಂತೋಷ್, ಮಂಜೇಶ್ವರ ಚಂದಾವರ, ಎಎಸ್ ಐ ಶೇಖರ ಗಟ್ಟಿ, ರಿಜು, ಹೆಚ್.ಸಿಗಳಾದ ರಂಜಿತ್, ಪ್ರವೀಣ್ ಶೆಟ್ಟಿ, ಪಿಸಿಗಳಾದ ಅಶೋಕ್, ವಾಸುದೇವ್, ಭಾಗಿಯಾಗಿದ್ದರು.