ಡೈಲಿ ವಾರ್ತೆ: ಫೆ./08/2026

ಉಡುಪಿ: ಬಾವಿಗೆ ಹಾರಿ ಆತ್ಮಹತ್ಯೆ – ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿ ಮೃತ್ಯು

ಉಡುಪಿ: ನಗರದ ಅಂಬಾಗಿಲು ವಾರ್ಡ್‌ನ ಕಕ್ಕುಂಜೆ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಘಟನೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತರಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತರನ್ನು ಕಕ್ಕುಂಜೆ ನಿವಾಸಿ ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ. ಅವರು ನೈಲಾನ್ ಹಗ್ಗದ ಸಹಾಯದಿಂದ ತಮ್ಮ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ರುಂಡ ಬೇರ್ಪಟ್ಟ ಪರಿಣಾಮ ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ಪಡೆದ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮೃತ ಪುರುಷೋತ್ತಮ ನಾಯಕ್ ಅವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರರಾಗಿದ್ದು, ಮಣಿಪಾಲದ ವ್ಯಾಲಿವ್ಯೂ ಹೊಟೇಲಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ನಿವೃತ್ತಿಯ ಹಂತದಲ್ಲಿದ್ದರು ಎನ್ನಲಾಗಿದೆ.

ಸಾಮಾಜಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ನಾಯಕ್ ಕುಟುಂಬವು ಸ್ಥಳೀಯವಾಗಿ ಉತ್ತಮ ಹೆಸರು ಪಡೆದ ಕುಟುಂಬವಾಗಿದ್ದು, ಈ ಅಕಾಲಿಕ ಸಾವು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ.

ಆರ್ಥಿಕ ಸಮಸ್ಯೆಯಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆಯ ಬಳಿಕ ಕಕ್ಕುಂಜೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.