ಡೈಲಿ ವಾರ್ತೆ:12 ಏಪ್ರಿಲ್ 2023
ದಕ್ಷಿಣಕನ್ನಡ: ಬಾಲಕ ಏಕಾಂಗಿಯಾಗಿ ಕೊರೆದ ಬಾವಿಯಲ್ಲಿ ನೀರು
ಬಂಟ್ವಾಳ:ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ರಜಾ ಅವಧಿಯಲ್ಲಿ ಬಾವಿಯೊಂದನ್ನು ತೋಡಿ ಸುದ್ದಿಯಾಗಿದ್ದಾನೆ. ಬಾಲಕನ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ನರಿಕೊಂಬು ನಾಯಿಲದ ಲೋಕನಾಥ್ ಅವರ ಪುತ್ರ, ಪಿಯುಸಿ ವಿದ್ಯಾರ್ಥಿ ಸೃಜನ್ ಬಾವಿ ಕೊರೆದ ವಿದ್ಯಾರ್ಥಿಯಾಗಿದ್ದಾನೆ.
ಸೃಜನ್ ಮನೆಗೆ ನಳ್ಳಿಯಲ್ಲಿ ನೀರು ಬರುತ್ತಿತ್ತು.ಆದರೆ ಮನೆಗೆ ಆಶ್ರಯವಾಗಿದ್ದ ನಳ್ಳಿ ನೀರು ಕೆಲವೊಮ್ಮೆ ಕೈ ಕೊಡುತ್ತಿತ್ತು.ಇದರಿಂದ ಮನೆಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು.
ಸೃಜನ್ ತಾನು ಬಾವಿ ಕೊರೆಯುವುದಾಗಿ ಹೇಳುತ್ತಿದ್ದ.ಆದರೆ ಮನೆಯವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಆದರೆ ಸೃಜನ್ ಪ್ರಥಮ ಪಿಯುಸಿ ಪರೀಕ್ಷೆ ಬಳಿಕ ರಜೆಯಲ್ಲಿ ಒಬ್ಬನೇ ಬಾವಿ ತೋಡಲು ಆರಂಭಿಸಿದ್ದಾನೆ.ಇದೀಗ ಬಾವಿ ತೋಡಿದ ಸೃಜನ್ ಗೆ ಕಳೆದ ವಾರ ಬೇಕಾದಷ್ಟು ನೀರು ಲಭಿಸಿದೆ.
ಬಾವಿ ಆಳವಾಗುತ್ತಿದ್ದಂತೆ ಮೂರ್ನಾಲ್ಕು ಬುಟ್ಟಿಯಲ್ಲಿ ಮಣ್ಣು ತುಂಬಿಸಿ ಬಳಿಕ ಮೇಲೆ ಬಂದು ಅದನ್ನು ಒಬ್ಬನೇ ಎಳೆದು ಮಣ್ಣು ಖಾಲಿ ಮಾಡುತ್ತಿದ್ದನು.ಸೃಜನ್ ಗೆ ಸುಮಾರು 24 ಅಡಿ ಆಳದಲ್ಲಿ ನೀರು ಲಭಿಸಿದ್ದು 3 ಅಡಿಯಷ್ಟು ನೀರು ತುಂಬಿಕೊಂಡಿದೆ.
ಸೃಜನ್ ಸಾಹಸವನ್ನು ಕಂಡು ಊರವರು ಮತ್ತು ಮನೆ ಮಂದಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.