ಡೈಲಿ ವಾರ್ತೆ:20 ಏಪ್ರಿಲ್ 2023
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇನಾಯತ್ ಆಲಿ ಗೆದ್ದರೆ ನನ್ನ ತಲೆ ಕೊಡಲು ಸಿದ್ಧ: ಮೊಯ್ದಿನ್ ಬಾವ
ದಕ್ಷಿಣ ಕನ್ನಡ: ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಡೆಗೂ ಇನಾಯತ್ ಆಲಿಗೆ ಟಿಕೆಟ್ ಫೈನಲ್ ಆಗಿದ್ದು. ಇದರ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದಿನ್ ಬಾವ ಬಂಡಾಯ ಎದ್ದಿದ್ದಾರೆ. ತನ್ನ ಟಿಕೆಟ್ ತಪ್ಪಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಕಾರಣ ಎಂದು ಬಾವ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಮಂಗಳೂರು ಉತ್ತರ ಕ್ಷೇತ್ರದ ಸೀಟನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ರಾಹುಲ್ ಗಾಂಧಿ ನಡೆಸಿದ ಪಕ್ಷದ ಸರ್ವೆಯಲ್ಲಿ 78 ಶೇ. ಮತಗಳು ನನ್ನ ಪರವಾಗಿ ಬಂದಿದ್ದವು. ಇನಾಯತ್ ಆಲಿಗೆ ಕೇವಲ 7 ಶೇ. ಮತ ಸಿಕ್ಕಿದ್ದವು. ಈ ಇನಾಯತ್ ಆಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ತಿಳಿದಿಲ್ಲ. ಡಿಸಿಸಿ ಕಚೇರಿಗೆ ಇವರು ಹೋಗಿದ್ದಾರೆಯೇ.. ಕೇವಲ ತನ್ನ ವ್ಯವಹಾರ ಪಾಲುದಾರ ಎಂಬ ನೆಪದಲ್ಲಿ ಡಿಕೆಶಿ ಟಿಕೆಟ್ ಮಾರಿದ್ದಾರೆ.
ನನ್ನ ಟಿಕೆಟ್ ತಪ್ಪಿಸಿದ್ದು ಡಿಕೆ ಶಿವಕುಮಾರ್ ಅವರೇ, ಖಚಿತವಾಗಿ ಹೇಳುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಗಿಸಲು ಡಿಕೆಶಿ ಹೊರಟಿದ್ದಾರೆ. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ.
ಇನಾಯತ್ ಆಲಿ ಎಲ್ಲಿಂದ ಹಣ ಮಾಡಿದ್ದು ಗೊತ್ತಿದೆ, ಡಿಕೆಶಿ ನೀರಾವರಿ ಸಚಿವನಾದ ಬಳಿಕ ಇವರು ಮೇಲೆ ಬಂದಿದ್ದು, 2013 ರಲ್ಲಿ ಇವರ ಸ್ಥಿತಿ ಏನಿತ್ತು ಅನ್ನೋದು ಜನರಿಗೆಲ್ಲ ಗೊತ್ತು. ಎಲ್ಲಿ ಕೊಳ್ಳೆ ಹೊಡೆದು ಹಣ ಮಾಡಿದ್ದಾರೆ ಅಂತ ಗೊತ್ತು. ಡಿಕೆಶಿಯವರು ನಲ್ವತ್ತು ಪರ್ಸೆಂಟ್, ಅದಾನಿ, ಗಿದಾನಿ ಅಂತೆಲ್ಲ ಮಾತಾಡ್ತಾರೆ. ಇವರು ಹಣಕ್ಕಾಗಿ ಎಷ್ಟು ಸೀಟ್ ಮಾರಿದ್ದಾರೆ ಗೊತ್ತಿಲ್ವಾ. ಮಿಸ್ಟರ್ ಡಿಕೆಶಿ ನೀವು ಬಂಡೆ ಆಗಿರಬಹುದು. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಸಾವಿರಾರು ಜನರ ಬೆಂಬಲ ಹೊಂದಿದ್ದೇನೆ.
ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ ಖಾದರ್, ನನಗೆ ಟಿಕೆಟ್ ತಪ್ಪಿಸಿದ್ದರಲ್ಲಿ ಪಾತ್ರ ಹೊಂದಿದ್ದಾರೆ. ಅವರು ನನ್ನ ಪರವಾಗಿ ನಿಂತಿಲ್ಲ, ಜಮೀರ್ ಅಹ್ಮದ್ ಖಾನ್ ಸೇರಿ ಅಲ್ಪಸಂಖ್ಯಾತ ಮುಖಂಡರೆಲ್ಲ ನನ್ನ ಪರವಾಗಿ ಒತ್ತಡ ಹೇರಿದ್ದಾರೆ. ಕರಾವಳಿಯ ಮುಖಂಡ ಖಾದರ್ ನನ್ನ ಪರ ನಿಂತಿಲ್ಲ ಯಾಕೆ. ಅವರಿಗೆ ದೇವರು ಒಳ್ಳೆದು ಮಾಡಲಿ. ನಾನು ಉಪವಾಸ ಹಿಡಿದು ಪವಿತ್ರ ತಿಂಗಳಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಮತ್ತು ಇವರ ತಂಡಕ್ಕೆ ತಕ್ಕ ಶಾಸ್ತಿ ಆಗಲಿದೆ. ನನ್ನ ಸೋದರ ಫಾರೂಕ್ ಜೆಡಿಎಸ್ ನಲ್ಲಿ ರಾಜ್ಯಸಭೆಗೆ ಸ್ಪರ್ಧಿಸಿದರೂ ನಾನು ಜೊತೆಗೆ ಹೋಗಿರಲಿಲ್ಲ. ಕಾಂಗ್ರೆಸ್ ಪಕ್ಷ ನಿಷ್ಠೆ ಹೊಂದಿದ್ದೆ. ಆದರೆ ಈಗ ನನ್ನನ್ನು ಬೇಕೆಂದೇ ಮೂಲೆಗುಂಪು ಮಾಡಿದ್ದಾರೆ. ನಾನು ಮಂಗಳೂರು ಉತ್ತರ ಕ್ಷೇತ್ರದಲ್ಲಿಯೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲಿ ಹಣಕ್ಕಾಗಿ ಓಟು ಮಾರುವ ಜನ ಇಲ್ಲ. ಹಣ ಖರ್ಚು ಮಾಡಲಿ. ಇಲ್ಲಿ ಇನಾಯತ್ ಗೆದ್ದರೆ ಫಲಿತಾಂಶ ದಿನವೇ ನನ್ನ ತಲೆ ಕೊಡಲು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಸವಾಲು ಹಾಕಿದ್ದಾರೆ.