ಡೈಲಿ ವಾರ್ತೆ:26 ಏಪ್ರಿಲ್ 2023

ನೀರಿಗಾಗಿ ಜಗಳ ಮನನೊಂದು
ಗೃಹಿಣಿ ಆತ್ಮಹತ್ಯೆಗೆ ಶರಣು!

ಬೆಂಗಳೂರು; ನೀರು ತುಂಬುವ ವಿಚಾರಕ್ಕೆ ಗಲಾಟೆ ಮಾಡಿ ಬಳಿಕ ಗೃಹಿಣಿಯೊಬ್ಬರ ಆತ್ಮಹತ್ಯೆ ಮಾಡಿಕೊಂಡ ಘಟನೆ
ಯಲಹಂಕ ಠಾಣಾ ವ್ಯಾಪ್ತಿಯ ಕೋಗಿಲು ಮುಖ್ಯರಸ್ತೆಯ ಸರ್ಕಾರಿ ವಸತಿ ಸಮುಚ್ಚಯದಲ್ಲಿ ನಡೆದಿದೆ.

ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿ, ಹಲ್ಲೆ ಮಾಡಿದರು ಎಂದು ಸರಸ್ವತಿ (35) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸರಸ್ವತಿ ಹಾಗೂ ಆಕೆಯ ಪತಿ ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಗಂಡ ನಾಗರಾಜ್ ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್ ಹಾಗೂ ಭವಾನಿ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್ ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರಂತೆ.

ಇದರಿಂದಾಗಿ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿ ಪ್ರಶ್ನಿಸಿದಾಗ, ಮನ ಬಂದಂತೆ ಬೈದು, ಚಾರಿತ್ರ್ಯವಧೆ ಮಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಎರಡೂ ಮನೆಯವರ ನಡುವೆ ಗಲಾಟೆಗಳಾಗಿದ್ದು, ಠಾಣೆಯ ಮೆಟ್ಟಿಲೇರಿದಾಗ ಪೊಲೀಸರು ಬುದ್ದಿವಾದ ಹೇಳಿ‌ ಕಳಿಸಿದ್ದಾರೆ.

ಏಪ್ರಿಲ್ 21ರಂದು ಸಿನಿಮಾ ಕೆಲಸದ ನಿಮಿತ್ತ ನಾಗರಾಜ್ ಧಾರವಾಡಕ್ಕೆ ಹೋದಾಗ ನೀರಿನ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ವೇಳೆ ಶ್ರೀನಿವಾಸ್, ಅವರ ಪತ್ನಿ ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.

ಹೀಗಾಗಿ ಮನನೊಂದ ಸರಸ್ವತಿ ಗಂಡನಿಗೆ ಕರೆ ಮಾಡಿ ಜಗಳದ ಮಾಹಿತಿ ತಿಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪತ್ನಿಯ ಸಾವಿಗೆ ಕಾರಣವಾದ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾಳ ವಿರುದ್ಧ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.