ಡೈಲಿ ವಾರ್ತೆ: 04 ಮೇ 2023

ಗಂಟೆಗೆ 300 ಕಿ ಮೀ ವೇಗದ ಬೈಕ್ ರೇಸರ್ ಯೂಟ್ಯೂಬರ್ ಅಗಸ್ತ್ಯ ಅಪಘಾತದಿಂದ ಮೃತ್ಯು

ನವದೆಹಲಿ;ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೂಟ್ಯೂಬರ್ ಹಾಗೂ ಬೈಕ್ ರೇಸರ್‌ ಅಗಸ್ತ್ಯ ಚೌಹ್ಹಾಣ್‌ ಮೃತಪಟ್ಟಿದ್ದಾರೆ.

ವೃತ್ತಿಪರ ಬೈಕರ್ ಆಗಿರುವ ಅಗಸ್ತ್ಯ, ತಮ್ಮದೇ ಸೂಪರ್‌ ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸುವಾಗ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಯೂಟ್ಯೂಬರ್ ಅಗಸ್ತ್ಯ ನವದೆಹಲಿಯಿಂದ ತಮ್ಮ ರೇಸಿಂಗ್ ಬೈಕ್‌ನಲ್ಲಿ ತೆರಳುವಾಗ ಉತ್ತರ ಪ್ರದೇಶದ ತಪ್ಪಲ್‌ ಪೊಲೀಸ್ ಠಾಣೆಯಿಂದ 47 ಮೈಲಿ ದೂರದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇ ಈ ಅವಘಡ ಸಂಭವಿಸಿದೆ.

ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್‌ ವೇಗದಲ್ಲಿ ಬೈಕ್‌ ಓಡಿಸುವಾಗ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಆ ಬಳಿಕ ರೇಸ್ ಬೈಕ್ ಅದೇ ವೇಗದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇನ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಅಗಸ್ತ್ಯ ಧರಿಸಿದ್ದ ಗುಣಮಟ್ಟದ ಹೆಲ್ಮೆಟ್‌ ಚೂರಾಗಿ ಬಿದ್ದಿತ್ತು. ಪರಿಣಾಮ ಬೈಕರ್ ಅಗಸ್ತ್ಯ ಚೌಹ್ಹಾಣ್ ಅಲ್ಲೇ ಕ್ಷಣ ಮಾತ್ರದಲ್ಲೇ ಕೊನೆಯುಸಿರೆಳೆದರು. ಮಾರಾಣಾಂತಿಕವಾದ ಗಾಯವಾಗಿದ್ದರಿಂದ ಅವರ ದೇಹದ ಸುತ್ತಲೂ ರಕ್ತ ಮಡುಗಟ್ಟಿ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅಗಸ್ತ್ಯ ಚೌಹ್ಹಾಣ್‌, ಉತ್ತರಾಖಂಡ್‌ನ ಡೆಹ್ರಾಡೂನ್‌ ನಿವಾಸಿಯಾಗಿದ್ದರು. ಅಗಸ್ತ್ಯ ‘ಪ್ರೊ ರೈಡರ್‌ 1000’ಎನ್ನುವ ಹೆಸರಿನ ಯೂಟ್ಯೂಬ್‌ ಚಾನೆಲ್ ನಡೆಸುತ್ತಿದ್ದರು. ಈ ಯೂಟ್ಯೂಬ್ ಚಾನೆಲ್‌ಗೆ 1.2 ಮಿಲಿಯನ್‌ ಸಬ್‌ಸ್ಕ್ರೈಬರ್ ಇದ್ದಾರೆ. ಈ ಅವಘಡ ಸಂಭವಿಸುವ 16 ಗಂಟೆ ಮೊದಲು ಯೂಟ್ಯೂಬ್‌ನಲ್ಲಿ ತಮ್ಮ ಸ್ನೇಹಿತರಿಗೆ ನವದೆಹಲಿಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದರು.