ಡೈಲಿ ವಾರ್ತೆ:15 ಮೇ 2023
ದಕ್ಷಿಣ ಕನ್ನಡ: ಮಹಿಳೆಗೆ ಕೆಲಸ ಕೊಡಿಸುವ ನೆಪದಲ್ಲಿ ಉಜಿರೆಯ ಉದ್ಯಮಿಯೋರ್ವನಿಂದ ಮಾನಭಂಗಕ್ಕೆ ಯತ್ನ – ದೂರು ದಾಖಲು
ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ತನ್ನನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋದ ಉಜಿರೆಯ ಉದ್ಯಮಿಯೊಬ್ಬರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದು ಮಾತ್ರವಲ್ಲದೆ ಮಾನಭಂಗಕ್ಕೆ ಪ್ರಯತ್ನಪಟ್ಟಿದ್ದಾರೆ ಎಂದು ಗೃಹಿಣಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಮೇ 14ರಂದು ಉಜಿರೆಯಲ್ಲಿ ನಡೆದಿದೆ.
ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರು ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ನಿವಾಸಿ ಸುಜಾತಾ ದೂರು ನೀಡಿದವರು.
ಸುಜಾತಾ ಮತ್ತು ಅವರ ಪತಿ ಕಿರಣ್ ಗೌಡ ಅವರು ಪ್ರಭಾಕರ್ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭ ಅವರ ಮನೆಯಲ್ಲೇ ಆಶ್ರಯ ನೀಡಿ ಮೇ 14ರಂದು ಪತಿ ಕಿರಣ್ ಅವರನ್ನು ತಮ್ಮ ಸಂಸ್ಥೆಯ ಅಡುಗೆ ಕೆಲಸಕ್ಕೆ ನಿಯೋಜಿಸಿದ್ದರು. ಸುಜಾತಾ ಅವರಿಗೆ ಧರ್ಮಸ್ಥಳದ ತಮ್ಮದೇ ಸಂಸ್ಥೆಯಲ್ಲಿ ಕೆಲಸಕ್ಕೆ ತಾನೇ ಬಿಟ್ಟು ಬರುವುದಾಗಿ ಹೇಳಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದರು. ಆದರೆ ಕಾರು ಧರ್ಮಸ್ಥಳ ಕಡೆಗೆ ಹೋಗದೆ ಕಕ್ಕಿಂಜೆ ಮಾರ್ಗವಾಗಿ ಹೋಗಿದ್ದರು.
ಈ ವೇಳೆ ಸುಜಾತಾರಿಗೆ ಅನುಮಾನ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ನಿನ್ನ ಪತಿಗೆ ಕೆಲಸ ಕೊಡಿಸಿದ್ದೇನೆ ಎಂದು ಹೇಳಿ ಅವಮಾನಕರವಾಗಿ ವರ್ತಿಸಿದ್ದು, ಅಲ್ಲದೇ ಸುಜಾತಾ ಅವರ ಮಾನಭಂಗಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಜೋರಾಗಿ ಕಿರುಚಾಡಿದಾಗ ಸ್ಥಳೀಯರು ಅಲ್ಲಿಗೆ ಬರುವುದನ್ನು ಕಂಡು ಆರೋಪಿಯು ಕಾರನ್ನು ಮುಂದಕ್ಕೆ ಕೊಂಡೊಯ್ದು ಸುಜಾತಾರನ್ನು ಕಾರಿನಿಂದ ಇಳಿಸಿ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.