

ಡೈಲಿ ವಾರ್ತೆ: ಫೆ./12/2026
ಅಜಿತ್ ಕುಮಾರ್ ಶೆಟ್ಟಿಗೆ ದಾಖಲಾದ ಪ್ರಕರಣ ರಾಜಕೀಯ ಪ್ರೇರಿತವೇ? ನಿಷ್ಪಕ್ಷಪಾತ ತನಿಖೆಗೆ ಯುವ ಕಾಂಗ್ರೆಸ್ ಆಗ್ರಹ

ಉಡುಪಿ: ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ಶ್ರೀ ಅಜಿತ್ ಕುಮಾರ್ ಶೆಟ್ಟಿಯವರ ವಿರುದ್ಧ ದಾಖಲಾಗಿರುವ ಪ್ರಕರಣವು ತಪ್ಪು ಮಾಹಿತಿಯ ಆಧಾರದ ಮೇಲೆ ರೂಪುಗೊಂಡಿರುವುದು ವಿಷಾದನೀಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಲೀಗಲ್ ಸೆಲ್ ಅಧ್ಯಕ್ಷರಾದ ಅಡ್ವೊಕೇಟ್ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವ ಮೊದಲು ಸಮಗ್ರ ಪರಿಶೀಲನೆ ನಡೆಸುವುದು ಕಾನೂನು ವ್ಯವಸ್ಥೆಯ ಮೂಲ ಕರ್ತವ್ಯವಾಗಿದ್ದು, ಈ ಪ್ರಕರಣದಲ್ಲಿ ಆ ಪ್ರಕ್ರಿಯೆ ಸಮರ್ಪಕವಾಗಿ ಪಾಲನೆಯಾಗಿಲ್ಲ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ ಎಂದು ಅವರು ಹೇಳಿದರು.
ಸತ್ಯಾಂಶಗಳ ಆಧಾರದ ಮೇಲೆ, ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೆ, ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪು ಮಾಹಿತಿ ನೀಡಿದವರ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಪೋಲಿಸ್ ಹಿರಿಯಾಧಿಕಾರಿಯವರ ಹೆಸರನ್ನು ಬಳಸಿ ಶ್ರೀ ಅಜಿತ್ ಕುಮಾರ್ ಶೆಟ್ಟಿಯವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವೂ ಬೆಳಕಿಗೆ ಬಂದಿದೆ. ಇದು ಕಾನೂನು ವ್ಯವಸ್ಥೆಯ ಗೌರವಕ್ಕೆ ಧಕ್ಕೆಯಾದ ಸಂಗತಿಯಾಗಿದ್ದು, ಈ ಬಗ್ಗೆ ಸಂಬಂಧಿತ ಮಾಜಿ ಶಾಸಕ ಶ್ರೀ ಸುಕುಮಾರ್ ಶೆಟ್ಟಿಯವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ನ್ಯಾಯ, ಪಾರದರ್ಶಕತೆ ಮತ್ತು ಕಾನೂನು ಸಮಾನತೆ ಎಂಬ ತತ್ವಗಳನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ. ಜನತೆ ಸತ್ಯವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಅಡ್ವೊಕೇಟ್ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.