

ಡೈಲಿ ವಾರ್ತೆ: ಫೆ./11/2026
ರಾಜಕೀಯ ಪ್ರಭಾವದ ದುರುಪಯೋಗ ಆರೋಪ: ಬೆದರಿಕೆ, ಸುಳ್ಳು ಕೇಸು ವಿರುದ್ಧ ಅಜಿತ್ ಶೆಟ್ಟಿ ಕಿಡಿ

ಕುಂದಾಪುರ, ಫೆ. 11: ಮಾಜಿ ಶಾಸಕ ಸುಕುಮಾರ್ ಶೆಟ್ಟಿಯವರ ಸಹಚರರು ಮನೆಗೆ ಬಂದು ಗಲಾಟೆ ನಡೆಸಿದರೆಂದು ಆರೋಪಿಸಿರುವ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ನಂತರ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಫೆಬ್ರವರಿ 7, 2026 ರಂದು ಸಂಜೆ ಸುಮಾರು 6.30ರ ವೇಳೆಗೆ ತಾನು ಮನೆಯಲ್ಲಿ ಇಲ್ಲದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ಮಾಜಿ ಶಾಸಕರ ಸಹಚರರು ಎಂದು ಹೇಳಲಾಗುವ ನಾಲ್ವರು ಮದ್ಯಪಾನ ಮಾಡಿ ತನ್ನ ಮನೆಗೆ ಬಂದು ಗಲಾಟೆ ನಡೆಸಿ ತೆರಳಿದ್ದಾರೆ ಎಂದು ಅಜಿತ್ ಶೆಟ್ಟಿ ದೂರಿದ್ದಾರೆ.
ಈ ಸಂಬಂಧ ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ನಂತರ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 0006/2026 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ತನ್ನ ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾಜಿ ಶಾಸಕ ಸುಕುಮಾರ್ ಶೆಟ್ಟಿಯವರು ರಾಜಕೀಯ ಪ್ರಭಾವ ಬಳಸಿಕೊಂಡು ಪೊಲೀಸ್ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿ ಸಂದೀಪ್ ಶೆಟ್ಟಿಯಿಂದ ತನ್ನ ವಿರುದ್ಧ ಸುಳ್ಳು ದೂರು ದಾಖಲಿಸುವಂತೆ ಮಾಡಿದ್ದಾರೆ ಎಂದು ಅಜಿತ್ ಶೆಟ್ಟಿ ಆರೋಪಿಸಿದ್ದಾರೆ.
ಇದಕ್ಕೂ ಮುನ್ನವೇ ದೂರವಾಣಿ ಮೂಲಕ ನೇರ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿರುವ ಅವರು, ಈಗ ದಾಖಲಾಗಿರುವ ಪ್ರಕರಣ ಅದೇ ಬೆದರಿಕೆಗಳ ಮುಂದುವರಿದ ರೂಪವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಶಕ್ತಿಯನ್ನು ಬಳಸಿಕೊಂಡು ನಿರಪರಾಧಿಗಳನ್ನು ಹೆದರಿಸುವ ಹಾಗೂ ಮೌನಗೊಳಿಸುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ವಿಷಯ ತಂದಿರುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಾನೂನಿಗಿಂತ ರಾಜಕೀಯ ಪ್ರಭಾವ ದೊಡ್ಡದಾಗಬಾರದು. ಸುಳ್ಳು ಪ್ರಕರಣಗಳ ಮೂಲಕ ನ್ಯಾಯವನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ತನ್ನ ಆಗ್ರಹ ಎಂದು ಸ್ಪಷ್ಟಪಡಿಸಿದ್ದಾರೆ.
“ಸತ್ಯದ ಪರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಬೆದರಿಕೆ, ಸುಳ್ಳು ಕೇಸು ಹಾಗೂ ರಾಜಕೀಯ ಒತ್ತಡಗಳಿಗೆ ನಾನು ಭಯಪಡುವುದಿಲ್ಲ,” ಎಂದು ಅಜಿತ್ ಕುಮಾರ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.