ಡೈಲಿ ವಾರ್ತೆ:24 ಮೇ 2023
ಶಾಂತಿ ಕದಡಿದರೆ ಬಜರಂಗದಳ, ಆರ್‌ಎಸ್‌ಎಸ್ ನಿಷೇಧ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರಕಾರ ನಿಷೇಧಿಸುತ್ತದೆ ಮತ್ತು ಬಿಜೆಪಿ ನಾಯಕತ್ವವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್, ”ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ನಿಷೇಧ ಹೇರಲಾಗುವುದು” ಎಂದು ಖರ್ಗೆ ಹೇಳಿದ್ದಾರೆ.
”ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರಕಾರ ಹಿಂಪಡೆಯಲಿದೆ. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ” ಎಂದರು.
”ಜನರು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರಿಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ” ಎಂದರು.