ಡೈಲಿ ವಾರ್ತೆ:26 ಮೇ 2023

ದಕ್ಷಿಣ ಕನ್ನಡ:ಉದ್ಯಮಿಯೋರ್ವ ಸೊಂಟಕ್ಕೆ ಬಲೂನು ಕಟ್ಟಿಕೊಂಡು ಕುಮಾರಧಾರ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣು!

ಕಡಬ : ಉದ್ಯಮಿಯೊಬ್ಬರು ಸೊಂಟಕ್ಕೆ ಬಲೂನು ಕಟ್ಟಿಕೊಂಡು ಸೇತುವೆ ಮೇಲಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ಇಂದು ನಸುಕಿನ ಹೊತ್ತು ಕಡಬ ತಾಲೂಕಿನ ಶರವೂರು ಸಮೀಪ ಶಾಂತಿಮೊಗರು ಎಂಬಲ್ಲಿ ಸಂಭವಿಸಿದೆ.

ಶಾಂತಿಮೊಗರು ಅಲಂಗಾರಿನಲ್ಲಿ ದುರ್ಗಾಂಬ ಹಾರ್ಡ್‌ವೇರ್ ಎಂಬ ಅಂಗಡಿ ಹೊಂದಿರುವ ಸಾಮಾಜಿಕ, ಧಾರ್ಮಿಕ ಮುಂದಾಳು ಚಂದ್ರಶೇಖರ ಪೂಜಾರಿ (70) ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 4 ಗಂಟೆ ವೇಳೆಗೆ ಕಾರನ್ನು ಸೇತುವೆ ಮೇಲೆ ನಿಲ್ಲಿಸಿ ಸೊಂಟಕ್ಕೆ ಹಗ್ಗದಿಂದ ಬಲೂನು ಕಟ್ಟಿಕೊಂಡು ನದಿಗೆ ಜಿಗಿದಿದ್ದಾರೆ. ಶವ ಹುಡುಕಲು ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಸೊಂಟಕ್ಕೆ ಬಲೂನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ರಾತ್ರಿ ಭಜನೆ ಮಾಡಿ ಮೊಮ್ಮಕ್ಕಳೊಂದಿಗೆ ಬಲೂನ್‌ನಲ್ಲಿ ಆಟವಾಡುತ್ತಿದ್ದರು. ಅದೇ ಬಲೂನ್ ಕಟ್ಟಿ ನದಿಗೆ ಹಾರಿದ್ದಾರೆ. ಶಾಂತಿಮೊಗರಿನ ಪೂವಪ್ಪ ಗೌಡ ಎಂಬವರು ನದಿಯಿಂದ ಶವ ಮೇಲೆತ್ತಿದ್ದಾರೆ. ಬಲೂನು ಇದ್ದ ಕಾರಣ ಶವ ಹುಡುಕಲು ಸಮಸ್ಯೆಯಾಗಿಲ್ಲ.

ಪತ್ನಿ, ಇಬ್ಬರು ಪುತ್ರರಿದ್ದು, ಇಬ್ಬರಿಗೂ ಮದುವೆಯಾಗಿದೆ. ಸಂತೃಪ್ತ ಕುಟುಂಬ, ವ್ಯಾಪಾರ ವಹಿವಾಟು ಕೂಡ ಚೆನ್ನಾಗಿತ್ತು.

ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಹೀಗಿದ್ದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಪರಿಸರದಲ್ಲಿ ಆಶ್ಚರ್ಯವುಂಟು ಮಾಡಿದೆ. ಕಾರಿನಲ್ಲಿ ಅವರು ಬರೆದಿಟ್ಟ ಪತ್ರವೊಂದು ಸಿಕ್ಕಿದೆ. ಅದರಲ್ಲಿ ಕಾರು ಮತ್ತಿ ಕೀ ಸೇತುವೆ ಮೇಲಿದೆ ಎಂದು ಬರೆದಿಟ್ಟಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಶವ ಮಹಜರು ಮಾಡಿದರು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಚಂದ್ರಶೇಖರ ಪೂಜಾರಿ ಯಕ್ಷಗಾನ ಅರ್ಥಧಾರಿ ಮತ್ತು ಸಂಘಟಕರೂ ಆಗಿದ್ದರು. ಆಲಂಕಾರು ಮೂರ್ತೆದಾರರ ಸಹಕಾರಿ ಸಂಘ ಮೂರು ಅವಧಿಗೆ ಅಧ್ಯಕ್ಷರಾಗಿದ್ದರು. ಶರವೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು.